ಬೆಂಗಳೂರು; ರಾಜ್ಯದಲ್ಲಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕು ಹೆಚ್ಚುತ್ತಿದೆ. ಅದರಲ್ಲಿಯೂ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ರಾಜ್ಯದ 5 ಜಿಲ್ಲೆಗಳಿಗೆ ಕಂಟಕವಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ಮೂರನೇ ಅಲೆಯಲ್ಲಿ ರೂಪಾಂತರಿ ವೈರಸ್ ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತಿದೆ. ಬೆಂಗಳೂರು ನಗರ, ಮಂಡ್ಯ, ಮೈಸೂರು, ಉಡುಪಿ, ಕೋಲಾರ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. 2 ಡೋಸ್ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಕೇಸ್ ಹೆಚ್ಚಾಗುವುದನ್ನು ತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೋವಿಡ್ ಪ್ರಕರಣ ಏರಿಕೆಯಾಗುವ ಸಾಧ್ಯತೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಮಾಹಿತಿ ನೀಡಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ವ್ಯಾಕ್ಸಿನ್ ಪಡೆಯದಿದ್ದರೆ ಜೀವಕ್ಕೆ ತೊಂದರೆಯಾಗಬಹುದು. ಎರಡು ಡೋಸ್ ಲಸಿಕೆ ಪಡೆದರೆ ಸಾವು-ನೋವು ತಪ್ಪಿಸಬಹುದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಬಹುದು. ನಿರ್ಲಕ್ಷ ಮಾಡದೇ 2 ಡೋಸ್ ಲಸಿಕೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.
ಇದೇ ವೇಳೆ ಲಾಕ್ ಡೌನ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಸಂಪೂರ್ಣ ಲಾಕ್ ಡೌನ್ ವಿಚಾರವನ್ನೇ ಸರ್ಕಾರ ಮಾಡಿಲ್ಲ. ಲಾಕ್ ಡೌನ್ ಕಳೆದುಹೋದ ನೀತಿ. ಆರ್ಥಿಕ ಚಟುವಟಿಕೆಗಳ ಮೇಲೆ ಯಾವುದೇ ತೊಂದರೆಯಾಗದಂತೆ ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ಮಾತ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.
ಮಧ್ಯಾಹ್ನ 12:30ಕ್ಕೆ ಹಿರಿಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಸಂಪೂರ್ಣ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.