ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸಂಪುಟ, ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡುವ ವ್ಯವಹಾರಗಳಿಗೆ ಪ್ರೋತ್ಸಾಹ ಧನ ನೀಡಲೆಂದು 1,300 ಕೋಟಿ ರೂಪಾಯಿಯ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.
2021-22ರ ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಘೋಷಣೆಯಂತೆ ಹೊಸದಾಗಿ ಬಂದ ಈ ಯೋಜನೆಯನ್ನು ರೂಪಿಸಲಾಗಿದೆ.
“ಯೋಜನೆಯಡಿ, ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಭೀಮ್-ಯುಪಿಐ ಮೂಲಕ ಮಾಡುವ ಕಡಿಮೆ ಮೌಲ್ಯದ ಪಾವತಿಗಳಿಗೆ ವಹಿವಾಟಿನ ಮೌಲ್ಯದ ಪ್ರತಿಶತ (ಪಿ2ಎಂ) ಪಾವತಿ ಮೂಲಕ ಬ್ಯಾಂಕುಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಏಪ್ರಿಲ್ 1, 2021ರಿಂದ ಅನ್ವಯವಾಗುವ ಈ ಯೋಜನೆಗೆ 1,300 ಕೋಟಿ ರೂ.ಗಳನ್ನು ಎತ್ತಿಡಲಾಗಿದೆ” ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ಈ ಯೋಜನೆ ಮೂಲಕ ಡಿಜಿಟಲ್ ಪಾವತಿಗೆಂದು ಪರಿಣಾಮಕಾರಿ ವಾತಾವರಣ ನಿರ್ಮಿಸಿ, ಎಲ್ಲಾ ಕ್ಷೇತ್ರಗಳು ಹಾಗೂ ವರ್ಗಗಳ ಜನರಿಗೆ ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್-ಯುಪಿಐ ಡಿಜಿಟಲ್ ಪಾವತಿಗಳಿಗೆ ಮುಂದಾಗುವಂತೆ ಉತ್ತೇಜನ ನೀಡಲು ಈ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆ ವಿವರಿಸುತ್ತದೆ.
ರುಪೇ ಕಾರ್ಡ್ ಮತ್ತು ಭೀಮ್-ಯುಪಿಐ ಮೂಲಕ 2,000 ರೂ.ಗಳವರೆಗೂ ಮಾಡುವ ಡಿಜಿಟಲ್ ಪಾವತಿಗಳಿಗೆ ಯೋಜನೆ ಮೂಲಕ ಬ್ಯಾಂಕುಗಳಿಗೆ ಪಿ2ಎಂ ವೆಚ್ಚದ ಮರುಪಾವತಿ ಮಾಡಲಾಗುವುದು.
ನವೆಂಬರ್ ತಿಂಗಳೊಂದರಲ್ಲೇ ದೇಶದಲ್ಲಿ 423 ಕೋಟಿ ಡಿಜಿಟಲ್ ವಹಿವಾಟುಗಳ ಮೂಲಕ 7.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ನಡೆದಿದೆ.