ವಿವಿಧ ವಲಯಗಳಿಂದ ತೀವ್ರ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠಿತ ಬ್ಯಾಂಕ್ ಎಸ್ಬಿಐ ಮಹಿಳಾ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಹೊರಡಿಸಿದ್ದ ವಿವಾದಾತ್ಮಕ ಮಾರ್ಗಸೂಚಿಯನ್ನು ಹಿಂಪಡೆದಿದೆ.
ಬ್ಯಾಂಕ್ ನೇಮಕಾತಿಗೆ ಸಿಬ್ಬಂದಿಯ ಸಾಮರ್ಥ್ಯದ ವಿಚಾರವಾಗಿ ಕೆಲ ದಿನಗಳ ಹಿಂದಷ್ಟೇ ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರಲ್ಲಿ ಮಹಿಳೆಯರು ಹಾಗೂ ಗರ್ಭಿಣಿಯರು ಸೇವೆಗೆ ಸೇರುವ ಬಗ್ಗೆ ಕೆಲವು ವಿವಾದಾತ್ಮಕ ನಿಬಂಧನೆಗಳನ್ನು ನೀಡಲಾಗಿತ್ತು. ಹೊಸ ನಿಯಮದ ಪ್ರಕಾರ ಮೂರು ತಿಂಗಳು ಮೇಲ್ಪಟ್ಟ ಮಹಿಳಾ ಅಭ್ಯರ್ಥಿಯನ್ನು ಸೇವೆಗೆ ಸೇರ್ಪಡೆ ಮಾಡಲು ಅವರು ತಾತ್ಕಾಲಿಕವಾಗಿ ಅಸಮರ್ಥರು ಹೀಗಾಗಿ ಅವರು ಹೆರಿಗೆಯಾದ ನಾಲ್ಕು ತಿಂಗಳ ಬಳಿಕ ಸೇವೆಗೆ ಹಾಜರಾಗಲು ಅನುಮತಿ ನೀಡಲಾಗಿತ್ತು.
ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ನಿಯಮವು ಕಾರ್ಮಿಕ ವಲಯ ಹಾಗೂ ದೆಹಲಿ ಮಹಿಳಾ ಆಯೋಗದಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿದ ಎಸ್ಬಿಐ ಇದೀಗ ಗರ್ಭಿಣಿ ಅಭ್ಯರ್ಥಿಗಳ ನೇಮಕಾತಿ ಕುರಿತಂತೆ ಹೊರಡಿಸಿದ್ದ ಹೊಸ ಮಾರ್ಗಸೂಚಿಯನ್ನು ಹಿಂಪಡೆದಿದೆ. ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಸೂಚನೆಗಳನ್ನೇ ಮುಂದುವರಿಸುವುದಾಗಿ ಎಸ್ಬಿಐ ನಿರ್ಧರಿಸಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.