ಮನುಷ್ಯನ ಹೊಟ್ಟೆಯೇ ಆರೋಗ್ಯದ ಗುಟ್ಟು ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ಜೀರ್ಣಕ್ರಿಯೆ ಸರಾಗವಾಗಿದ್ದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ನಾರಿನಂಶ ಹೇರಳವಾಗಿರುವ ಹಣ್ಣು, ತರಕಾರಿ ಸೇವನೆಯೂ ಪಚನಕ್ರಿಯೆಗೆ ನೆರವಾಗುತ್ತದೆ. ಅದರಂತೆಯೇ ವಾರದಲ್ಲಿ ಒಮ್ಮೆಯಾದರೂ ಸಿರಿಧಾನ್ಯವನ್ನು ಬಳಸುವುದರಿಂದ ದೇಹಕ್ಕೆ ಅಗತ್ಯವಾದ ನಾರಿನಂಶ ಸಿಗುತ್ತದೆ.
ಯಾವುದೇ ಸಿರಿಧಾನ್ಯವನ್ನು ಬಳಸುವ ಮುನ್ನ ಕೆಲವು ಗಂಟೆ ನೆನೆಸಿಟ್ಟು ಆ ನಂತರ ಅಡುಗೆ ಮಾಡುವುದು ಸೂಕ್ತ ವಿಧಾನ. ಇನ್ನೂ ಸಿರಿಧಾನ್ಯಗಳಲ್ಲಿ ನವಣೆ ಮತ್ತು ರಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ. ನಾವು ಇಂದು ನವಣೆ ಮತ್ತು ಪಾಲಕ್ ಬಳಸಿ ಪೊಂಗಲ್ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.
ಮೊದಲಿಗೆ ಒಂದು ಲೋಟ ನವಣೆಯನ್ನು 2-4 ಗಂಟೆಗಳ ನೀರಿನಲ್ಲಿ ನೆನೆಸಿಡಬೇಕು. ಇಲ್ಲವೇ ಹಿಂದಿನ ದಿನ ರಾತ್ರಿಯೂ ನೆನೆಸಿಡಬಹುದು. ಬೆಳಿಗ್ಗೆ ನವಣೆಯನ್ನು ಬಳಸಬಹುದು.
ಕುಕ್ಕರ್ಗೆ ನೆನೆಸಿಟ್ಟ ಒಂದು ಲೋಟ ನವಣೆ, ಒಂದು ಲೋಟದಷ್ಟು ಹೆಸರುಬೇಳೆ, ಸಣ್ಣದಾಗಿ ಹೆಚ್ಚಿಟ್ಟುಕೊಂಡ ಒಂದು ಕಟ್ಟು ಪಾಲಕ್ ಸೊಪ್ಪು ಜೊತೆಗೆ ಒಂದು ಸ್ಪೂನ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು. ಇದಕ್ಕೆ 6 ಲೋಟ ನೀರು ಸೇರಿಸಿ 3 ವಿಶಲ್ ಬರಿಸಿಕೊಳ್ಳಬೇಕು.
ನಂತರ ಒಂದು ಬಾಣಲಿಯಲ್ಲಿ ಒಂದು ಸ್ಪೂನ್ ತುಪ್ಪಕ್ಕೆ, ಕರಿಬೇವು, ತುರಿದುಕೊಂಡ ಶುಂಠಿ ಸ್ವಲ್ಪ, ಅರ್ಧ ಚಮಚದಷ್ಟು ಜೀರಿಗೆ, ಕುಟ್ಟಿ ಪುಡಿ ಮಾಡಿದ ಮೆಣಸಿನ ಪುಡಿ, ಒಣ ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿಕೊಳ್ಳಬೇಕು.
ಕುಕ್ಕರ್ ಆರಿದ ಬಳಿಕ ತೆಗೆದು ಅದಕ್ಕೆ ಈ ಒಗ್ಗರಣೆ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿದರೇ ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್ ಸವಿಯಲು ಸಿದ್ಧ. ದೇಸಿ ತುಪ್ಪದೊಂದಿಗೆ ಈ ಪೊಂಗಲ್ ಸೇವಿಸಿದರೇ ಶಕ್ತಿವರ್ಧನೆಯಾಗುತ್ತದೆ. ಇನ್ನೂ ಪಾಲಕ್ ಸೊಪ್ಪಿನ ಬಳಕೆಯಿಂದ ಅನಿಮಿಯಾ ಸಮಸ್ಯೆಯೂ ನಿವಾರಣೆಯಾಗುತ್ತದೆ.