ಭಾರತದ ಕ್ಯೂಆರ್ ಕೋಡ್ ಯುಪಿಐ ಪಾವತಿ ವಿಧಾನವನ್ನ ಭೂತಾನ್ ರಾಷ್ಟ್ರವೂ ಅಳವಡಿಸಿಕೊಂಡಿದೆ. ಈ ಮೂಲಕ ಭಾರತದ ಕ್ಯೂಆರ್ ಕೋಡ್ ಯುಪಿಐ ಪಾವತಿ ವಿಧಾನವನ್ನ ಅಳವಡಿಸಿಕೊಂಡ ಮೊದಲ ವಿದೇಶಿ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭೂತಾನ್ ಪಾತ್ರವಾಗಿದೆ.
ಮಂಗಳವಾರ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭೂತಾನ್ ಕೌಂಟರ್ ಲಿಯಾಲ್ಪೋ ನಾಮ್ಗೆ ತ್ಸೆರಿಂಗ್ ಜಂಟಿಯಾಗಿ ಭೂತಾನ್ನಲ್ಲಿ ಭೀಮ್ – ಯುಪಿಐ ವ್ಯವಹಾರಕ್ಕೆ ಚಾಲನೆ ನೀಡಿದ್ರು.
ಭೀಮ್ ಆ್ಯಪ್ ಮೂಲಕ ಮೊಬೈಲ್ ಆಧಾರಿತ ಪೇಮೆಂಟ್ಗಳಿಗೆ ಒಪ್ಪಿಗೆ ನೀಡಿದ ಭಾರತದ ಮೊದಲ ನೆರೆಯ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭೂತಾನ್ ಪಾತ್ರವಾಗಿದೆ.
ಯುಪಿಐ ವ್ಯವಹಾರಕ್ಕೆ ಚಾಲನೆ ನೀಡಿದ ಬಳಿಕ, ನಿರ್ಮಲಾ ಸೀತಾರಾಮನ್ ಭೂತಾನ್ನ ಸ್ಥಳೀಯ ಸಮುದಾಯಗಳು ತಯಾರಿಸುವ ತಾಜಾ ಕೃಷಿ ಉತ್ಪನ್ನಗಳನ್ನ ಮಾರಾಟ ಮಾಡುವ ಒಜಿಒಪಿ ಔಟ್ಲೆಟ್ನಿಂದ ಸಾವಯವ ಕೃಷಿ ಪದಾರ್ಥಗಳನ್ನ ಖರೀದಿ ಮಾಡಿ ಭೀಮ್ ಆ್ಯಪ್ ಮೂಲಕವೇ ಹಣ ಪಾವತಿ ಮಾಡಿದರು.
ಭೂತಾನ್ನಲ್ಲಿ ಇಂದು ಭೀಮ್ – ಯುಪಿಐ ವ್ಯವಹಾರ ಆರಂಭವಾಗಿದ್ದು ಈ ಮೂಲಕ ಉಭಯ ದೇಶಗಳ ಪಾವತಿ ವಿಧಾನ ಇನ್ನಷ್ಟು ಹತ್ತಿರವಾಗಿದೆ. ಇದರಿಂದಾಗಿ ಭಾರತ ಹಾಗೂ ಭೂತಾನ್ ನಡುವೆ ಪ್ರಯಾಣ ಬೆಳೆಸುವ ಪ್ರವಾಸಿಗರು ಹಾಗೂ ಉದ್ಯಮಿಗಳಿಗೆ ಅನುಕೂಲಕರವಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.