ಸದ್ಯ ಶುಂಠಿ ಹೆಸರು ಕೇಳ್ತಿದ್ದಂತೆ ಜನರ ಕಿವಿ ನೆಟ್ಟಗಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶುಂಠಿ ಟೀ, ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಶುಂಠಿಯಿಂದ ಸಿಹಿ ಕೂಡ ತಯಾರಿಸಬಹುದು. ಯಸ್. ಶುಂಠಿ ಬರ್ಫಿ ಮಾಡುವ ವಿಧಾನವನ್ನು ನಾವಿಂದು ಹೇಳ್ತೆವೆ.
ಶುಂಠಿ ಬರ್ಫಿಗೆ ಬೇಕಾಗುವ ಪದಾರ್ಥ:
ಶುಂಠಿ – 200 ಗ್ರಾಂ
ಸಕ್ಕರೆ – 300 ಗ್ರಾಂ
ತುಪ್ಪ – 2 ಟೀಸ್ಪೂನ್
ಏಲಕ್ಕಿ – 10
ಶುಂಠಿ ಬರ್ಫಿ ಮಾಡುವ ವಿಧಾನ :
ಶುಂಠಿ ಬರ್ಫಿ ಮಾಡಲು, ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ದಪ್ಪ ಆಕಾರದಲ್ಲಿ ಕತ್ತರಿಸಿ. ಈಗ ಈ ತುಂಡುಗಳನ್ನು ಮಿಕ್ಸರ್ ನಲ್ಲಿ ಹಾಕಿ ಸ್ವಲ್ಪ ಹಾಲು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಗ್ಯಾಸ್ ಹಚ್ಚಿ ಪ್ಯಾನ್ ಇಡಿ. ಪ್ಯಾನ್ ಬಿಸಿಯಾದಾಗ ಅದಕ್ಕೆ ತುಪ್ಪ ಸೇರಿಸಿ ಸ್ವಲ್ಪ ಬಿಸಿ ಮಾಡಲು ಬಿಡಿ. ತುಪ್ಪ ಬಿಸಿಯಾದಾಗ, ಅದಕ್ಕೆ ಶುಂಠಿ ಪೇಸ್ಟ್ ಸೇರಿಸಿ ಮತ್ತು ಐದು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿಯಿರಿ. ಐದು ನಿಮಿಷಗಳ ನಂತರ ಈ ಪೇಸ್ಟ್ ಗೆ ಸಕ್ಕರೆ ಸೇರಿಸಿ.
ಸಕ್ಕರೆ ಕರಗಿದ ನಂತ್ರ ಏಲಕ್ಕಿ ಹುಡಿ ಸೇರಿಸಿ, ಪೇಸ್ಟ್ ದಪ್ಪಗಾದಾಗ ಗ್ಯಾಸ್ ಉರಿ ಕಡಿಮೆ ಮಾಡಿ. ಕೈ ಆಡಿಸುತ್ತಿರುವುದನ್ನು ಮರೆಯಬೇಡಿ. ಪೇಸ್ಟ್ ತುಂಬಾ ದಪ್ಪವಾಗಿರಬೇಕು. ಒಂದು ತಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ತುಪ್ಪ ಸವರಿ. ಪೇಸ್ಟ್ ಹರಡಿ. ಅದು ತಣ್ಣಗಾದಾಗ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.