ಬಾರ್ ಒಂದರಲ್ಲಿ ಮುಖ ಸುಟ್ಟುಕೊಂಡಿದ್ದ 28 ವರ್ಷದ ಮಹಿಳೆಯೊಬ್ಬರು ಕಾನೂನು ಹೋರಾಟದ ಬಳಿಕ 74 ಸಾವಿರ ರೂಪಾಯಿ ಪರಿಹಾರವನ್ನು ಪಡೆದಿದ್ದಾರೆ. ಬೆಂಗಳೂರಿನ ಕೊಮ್ಯೂನಿಟಿ’ ಎಂಬ ಬಾರ್ನಲ್ಲಿ ಜ್ವಾಲೆ ಆಧಾರಿತ ಮದ್ಯವನ್ನು ಮಹಿಳೆ ಆರ್ಡರ್ ಮಾಡಿದ್ದರು.
ರೆಸಿಡೆನ್ಸಿ ರಸ್ತೆಯ ಪಬ್ ಒಂದಕ್ಕೆ ತನ್ನ ಮೂವರು ಸ್ನೇಹಿತರ ಜೊತೆಯಲ್ಲಿ ಈ ಮಹಿಳೆ 2019ರ ಫೆಬ್ರವರಿ 15ರಂದು ಭೇಟಿ ನೀಡಿದ್ದರು. ಇದೇ ದಿನದಂದು ಈ ಘಟನೆ ಸಂಭವಿಸಿತ್ತು.
ಅಕ್ಷಯನಗರ ನಿವಾಸಿಯಾದ ಮಹಿಳೆಗೆ ಪಬ್ನ ಸಿಬ್ಬಂದಿ ಜ್ವಾಲೆ ಆಧಾರಿತ ಮದ್ಯವನ್ನು ಆರ್ಡರ್ ಮಾಡುವಂತೆ ಪ್ರೇರೇಪಿಸಿದ್ದರು. ಹೀಗಾಗಿ ಇದೇ ಪಾನೀಯವನ್ನು ಮಹಿಳೆ ಆರ್ಡರ್ ಮಾಡಿದ್ದರು. ಬಳಿಕ ಅದನ್ನು ಮಹಿಳೆಯ ಬಾಯಿಗೆ ಸುರಿಯಲಾಗಿತ್ತು.
ಆದರೆ ಪಾನೀಯ ಬಾಯಿಗೆ ಬೀಳುತ್ತಿದ್ದಂತೆಯೇ ಆಕೆ ಸುಟ್ಟ ಗಾಯಗಳಿಂದ ಬಳಲಿದ್ದಾಳೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಹಿಳೆಯು 2019ರ ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ಗ್ರಾಹಕ ಕೋರ್ಟ್ನಲ್ಲಿ ದೂರನ್ನು ದಾಖಲಿಸಿದ್ದರು.
ಪಬ್ ಸಿಬ್ಬಂದಿಯಿಂದ ಆದ ನಿರ್ಲಕ್ಷ್ಯದಿಂದ ನನಗೆ ಹಾನಿ ಉಂಟಾಗಿದ್ದು ಹೀಗಾಗಿ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆ ಆಗ್ರಹಿಸಿದ್ದರು. ಮಹಿಳೆಯ ಪರ ವಕೀಲ ಆಸ್ಪತ್ರೆಯ ವರದಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಕೋರ್ಟ್ಗೆ ಒದಗಿಸಿದ್ದರು.
ಆದರೆ ಪಬ್ ಪರ ಹಾಜರಾದ ವಕೀಲರು ಈ ಮಹಿಳೆಯು ತನ್ನ ಸ್ವ ಇಚ್ಛೆಯಿಂದ ಈ ಪಾನೀಯನ್ನು ಆರ್ಡರ್ ಮಾಡಿದ್ದಾರೆ. ಹಾಗೂ ತಾನಾಗಿಯೇ ಈ ಪಾನೀಯವನ್ನು ಕುಡಿದಿದ್ದಾರೆ. ಹೀಗಾಗಿ ಪಬ್ನ ಯಾವುದೇ ಸಿಬ್ಬಂದಿ ಈ ಘಟನೆಗೆ ಜವಾಬ್ದಾರರಲ್ಲ ಎಂದು ವಾದಿಸಿದ್ದರು.
ವಾದ – ವಿವಾದವನ್ನು ಆಲಿಸಿದ ಗ್ರಾಹಕ ನ್ಯಾಯಾಲಯವು, ಮಹಿಳೆಯ ವೈದ್ಯಕೀಯ ವೆಚ್ಚ ಸೇರಿದಂತೆ ವಿವಿಧ ಲೆಕ್ಕಾಚಾರಗಳನ್ನು ಸೇರಿಸಿ ಪಬ್ ಮಾಲೀಕರು 74 ಸಾವಿರ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ಆದೇಶಿಸಿದ್ದಾರೆ.