ಬೆಂಗಳೂರಿನ 20 ವರ್ಷ ವಯಸ್ಸಿನ ಬಿಎಸ್ಸಿ ನರ್ಸಿಂಗ್ ವಿಭಾಗದ ವಿದ್ಯಾರ್ಥಿನಿ 17 ವರ್ಷದ ಅಪ್ರಾಪ್ತನನ್ನ ಮದುವೆಯಾದ ಆರೋಪದಡಿಯಲ್ಲಿ ಚಿಕ್ಕಮಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ಫೇಸ್ಬುಕ್ ಮೂಲಕ ಅಪ್ರಾಪ್ತನ ಸ್ನೇಹ ಸಂಪಾದಿಸಿದ್ದಳು.
ಅಪ್ರಾಪ್ತ ಚಿಕ್ಕಮಗಳೂರಿನ ನಿವಾಸಿಯಾಗಿದ್ದು 17 ವರ್ಷ ಪ್ರಾಯದ ಈತ 21 ವರ್ಷದವನು ಎಂದು ಸುಳ್ಳು ಹೇಳಿ ಈಕೆಯನ್ನ ಜೂನ್ 16ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಈ ಮದುವೆ ಕಾರ್ಯಕ್ರಮದಲ್ಲಿ ಆತನ ಕುಟುಂಬಸ್ಥರೂ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲ್ಯ ವಿವಾಹ ತಡೆ ಕಾನೂನಿನ ಅಡಿಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ದಂಪತಿ ಪ್ರತ್ಯೇಕ ಮನೆಯಲ್ಲಿ ಜೀವನ ಮಾಡುತ್ತಿದ್ದರು ಎಂದು ಚಿಕ್ಕಮಗಳೂರು ಎಸ್ಪಿ ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರ ವಿರೋಧದ ನಡುವೆಯೂ ಈ ಬಿಎಸ್ಸಿ ವಿದ್ಯಾರ್ಥಿನಿ ಅಪ್ರಾಪ್ತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು ಎನ್ನಲಾಗಿದೆ. ಇವರಿಬ್ಬರ ವಿವಾಹವನ್ನ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ನೆರವೇರಿಸಲಾಗಿತ್ತು. ಬಾಯಿಂದ ಬಾಯಿಗೆ ಈ ವಿಚಾರ ಹರಡಿ ಗ್ರಾಮಸ್ಥರಿಗೂ ಮಾಹಿತಿ ತಲುಪಿತ್ತು. ಗ್ರಾಮಸ್ಥರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಈ ಬಗ್ಗೆ ದೂರನ್ನ ನೀಡಿದ್ದರು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.