ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಡಿಎಂಕೆ ಶಾಸಕ ವೈ , ಪ್ರಕಾಶ್ ಪುತ್ರ ಕರುಣಾ ಸಾಗರ್, ಭಾವಿ ಸೊಸೆ ಬಿಂದು ಸೇರಿದಂತೆ ಏಳು ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಅತಿವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಒಂದೇ ಪಿಜಿಯಲ್ಲಿ ವಾಸವಿದ್ದ ಈ 7 ಮಂದಿ ರಾತ್ರಿ ಪಾರ್ಟಿ ಮುಗಿಸಿ ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.
ಆದರೆ ತಿರುವಿನಲ್ಲಿ ಆಡಿ ಕ್ಯೂ 3 ಕಾರು ನಿಯಂತ್ರಣಕ್ಕೆ ಸಿಗದ ಪರಿಣಾಮ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 7 ಮಂದಿಯೂ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಮೃತಪಟ್ಟ ಬಿಂದು, ಕರುಣಾಸಾಗರ್ ಸ್ವಂತ ಮಾವನ ಮಗಳು. ಕರುಣಾ ಸಾಗರ್ ಜೊತೆಯಲ್ಲಿ ಇದ್ದವರೆಲ್ಲ ಅವರ ಸ್ನೇಹಿತರು ಎನ್ನಲಾಗಿದೆ. ಆದರೆ ಇವರೆಲ್ಲ ಯಾರು ಎಂಬ ಪರಿಚಯ ಕರುಣಾ ಸಾಗರ್ ಕುಟುಂಬಸ್ಥರಿಗೆ ಇಲ್ಲ. ಪ್ರತ್ಯಕ್ಷದರ್ಶಿ ಸತೀಶ್ ಎಂಬವರು ಅಪಘಾತ ಸಂಬಂಧ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಅಪಘಾತ ನಡೆದ ವೇಳೆ ಸತೀಶ್ ರಸ್ತೆ ಬದಿ ಕಾರು ಪಾರ್ಕ್ ಮಾಡಿ ನಿದ್ದೆಗೆ ಜಾರಿದ್ದರು. ಓಲಾ ಕ್ಯಾಬ್ ಓಡಿಸುತ್ತಿದ್ದ ಸತೀಶ್ ಜೋರಾದ ಶಬ್ದ ಕೇಳಿ ಎಚ್ಚೆತ್ತಿದ್ದಾರೆ. ಅಪಘಾತದ ಭೀಕರತೆಗೆ ಕಾರು ದಟ್ಟ ಹೊಗೆಯಿಂದ ಆವರಿಸಿತ್ತು. ಕೂಡಲೇ ಸತೀಶ್ ಸೇರಿದಂತೆ ಹಲವರು ಕಾರಿನತ್ತ ಧಾವಿಸಿದ್ದರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟೈರ್ಗಳೇ ಕಳಚಿಬಿದ್ದಿದ್ದವು. ಸತೀಶ್ ಕೂಡಲೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ವೇಳೆಗಾಗಲೇ ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದರು. ಓರ್ವನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆತ ಕೂಡ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಆಡುಗೋಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮೃತ ಕರುಣಾ ಸಾಗರ್ ಮೆಡಿಸಿನ್ ಪಡೆಯಲು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಸ್ನೇಹಿತ ಉತ್ಸವ್ ಜೊತೆ ಬಂದಿದ್ದ. ಉಳಿದ ಐವರು ಕರುಣಾ ಸಾಗರ್ ಪಿಜಿ ಸ್ನೇಹಿತರು. ಮೃತ ಬಿಂದು ಹಾಗೂ ಕರುಣಾ ಸಾಗರ್ ಮದುವೆ ಕೂಡ ನಿಶ್ಚಯವಾಗಿತ್ತು. ಇವರೆಲ್ಲ ಆ ರಾತ್ರಿ ಕಾರಿನಲ್ಲಿ ಎಲ್ಲಿಗೆ ಹೊರಟಿದ್ದರು ಎಂಬ ಮಾಹಿತಿ ಮಾತ್ರ ಇನ್ನೂ ನಿಗೂಢವಾಗಿದೆ.
ಮೃತ ಕರುಣಾ ಸಾಗರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬೈಕ್ ರೇಸಿಂಗ್ ಬಗ್ಗೆ ಕ್ರೇಜ್ ಹೊಂದಿದ್ದ ಸಾಗರ್ಗೆ ಅತಿ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೃತರ ಶವವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಕಾರಿನಲ್ಲಿ ಒಟ್ಟು 7 ಮಂದಿಯಿದ್ದು ಇದರಲ್ಲಿ ನಾಲ್ವರು ಯುವಕರು ಹಾಗೂ ಮೂವರು ಯುವತಿಯರಿದ್ದರು ಎನ್ನಲಾಗಿದೆ. ಕಾರಿನಲ್ಲಿದ್ದ ಯಾರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ.
ಇನ್ನು ಮೃತ ಬಿಂದು ಬೆಂಗಳೂರಿಗೆ ಬಂದಿದ್ದೇ ನಮಗೆ ತಿಳಿದಿರಲಿಲ್ಲ ಎಂದು ಬಿಂದು ತಂದೆ ಚಂದ್ರಶೇಖರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬಿಂದು – ಕರುಣಾ ಮದುವೆ ಮಾತುಕತೆ ನಡೆದಿತ್ತು. ಸಾಗರ್ನನ್ನೇ ಮದುವೆ ಆಗೋದಾಗಿ ಬಿಂದು ಹೇಳಿದ್ದಳು. ಆಕೆ ರಾತ್ರಿ 8 ಗಂಟೆಗೆ ಫೋನ್ ಮಾಡಿದ್ದಳು. ಚೆನ್ನೈಗೆ ಹೋಗುತ್ತಿರೋದಾಗಿ ನಮಗೆ ಮಾಹಿತಿ ನೀಡಿದ್ದಳು. ಆದರೆ ಆಗಲೂ ಕೂಡ ಆಕೆ ಬೆಂಗಳೂರಿನಲ್ಲಿದ್ದ ವಿಚಾರ ನಮಗೆ ತಿಳಿದೇ ಇರಲಿಲ್ಲ ಎಂದು ತಂದೆ ಹೇಳಿದ್ದಾರೆ.
ಕರುಣಾ ಸಾಗರ್ ಮೃತದೇಹದ ಪೋಸ್ಟ್ ಮಾರ್ಟಂ ಅಂತ್ಯವಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ರವಾನೆ ಮಾಡಿದ ಬಳಿಕ ಹೊಸೂರಿನಲ್ಲಿ ಅಂತ್ಯಕ್ರಿಯೆ ನಡೆಸೋದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.