ದೇಶದಲ್ಲೇ ಮೊದಲ ಬಾರಿಗೆ ಒಮಿಕ್ರಾನ್ ವೈರಾಣು ಪೀಡಿತರು ಪತ್ತೆಯಾದ ಕಾರಣವೊಂದಕ್ಕೆ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಹೊಸ ಅವತಾರದ ಪರೀಕ್ಷೆಯನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ.
ನಗರದ ವೈದ್ಯರೊಬ್ಬರು ಒಮಿಕ್ರಾನ್ ಪೀಡಿತರಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 20ರಂದು ಇಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸಭೆಯೊಂದರಲ್ಲಿ ಹಾಜರಾಗಿದ್ದ ವೈದ್ಯಕೀಯ ವೃತ್ತಿಪರರನ್ನು ಬೆನ್ನತ್ತಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ).
ಈ ವೈದ್ಯರಿಗೆ ಅಂತಾರಾಷ್ಟ್ರೀಯ ಪ್ರಯಾಣದ ಇತ್ತೀಚಿನ ಇತಿಹಾಸ ಇಲ್ಲದೇ ಇದ್ದರೂ ಸೋಂಕು ತಗುಲಿರುವ ಕಾರಣ ಅಧಿಕಾರಿಗಳು ಸೋಂಕಿನ ಮೂಲ ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ. ಕೋವಿಡ್-19 ಪಾಸಿಟಿವ್ ಎಂದು ಪರೀಕ್ಷೆಯಲ್ಲಿ ಕಂಡು ಬರುವ ಒಂದು ದಿನದ ಮುಂಚೆ ಈ ವೈದ್ಯ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ವೈದ್ಯರ ಸಂಪರ್ಕಕ್ಕೆ ಬಂದ 100ಕ್ಕೂ ಹೆಚ್ಚು ಮಂದಿಯ ಟ್ರೇಸಿಂಗ್‌ಗೆ ಬಿಬಿಎಂಪಿ ಮುಂದಾಗಿದೆ.
ಇಲ್ಲಿದೆ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತೀಯ ನಟರ ಪಟ್ಟಿ
ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ 28ನೇ ವಾರ್ಷಿಕ ಸಭೆಯನ್ನು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬೆಂಗಳೂರಿನ 60ಕ್ಕೂ ಹೆಚ್ಚಿನ ವೈದ್ಯಕೀಯ ವೃತ್ತಿಪರರು ಭಾಗಿಯಾಗಿದ್ದರು. ಅನ್ಯ ದೇಶಗಳ ವೃತ್ತಿಪರರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಹಾಜರಾಗಿದ್ದರು.
ಈ ಸಭೆಯಲ್ಲಿ ಭಾಗಿಯಾಗಿದ್ದ ಮೂರು ಮಂದಿ ಕೋವಿಡ್ ಪಾಸಿಟಿವ್ ಎಂದು ಕಂಡು ಬಂದಿದ್ದಾರೆ. ಹೊಟೇಲ್ ಸಿಬ್ಬಂದಿ ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.