ಸಿನಿಮಾದಿಂದ ಪ್ರೇರಿತರಾದ ಇಬ್ಬರು ದುಷ್ಕರ್ಮಿಗಳು ನಕಲಿ ಗನ್ ಬಳಸಿ ರೈಲಿನಲ್ಲಿ ಪ್ರಯಾಣಿಕರ ಬಳಿ ದರೋಡೆ ಮಾಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಬೆಂಗಳೂರು ನಗರ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಹಾರದ ರವಿ ಸಿಂಗ್ ಹಾಗೂ ಉತ್ತರ ಪ್ರದೇಶ ಮೂಲದ ಸಂದೀಪ್ ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸಿಂಗ್ ದಶಕಗಳಿಂದಲೂ ಬೆಂಗಳೂರಿನಲ್ಲಿಯೇ ವಾಸವಿದ್ದ. ಹೀಗಾಗಿ ಈತನಿಗೆ ನಿರರ್ಗಳವಾಗಿ ಕನ್ನಡ ಮಾತನಾಡಲು ಬರುತ್ತಿತ್ತು ಎಂದು ತಿಳಿದು ಬಂದಿದೆ.
ಸಿಂಗ್ ದರೋಡೆ ದೃಶ್ಯವನ್ನು ಹೊಂದಿದ್ದ ಸಿನಿಮಾವನ್ನು ನೋಡಿ ಪ್ರೇರಣೆ ಪಡೆದುಕೊಂಡಿದ್ದ. ಹೀಗಾಗಿ ನಕಲಿ ಪಿಸ್ತೂಲ್ ಹಿಡಿದು ರೈಲು ಏರಿ ದುಷ್ಕರ್ಮಿಗಳು ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಪ್ಲಾನ್ ಮಾಡಿದ್ದರು.
ಅದರಂತೆಯೇ ರಾತ್ರಿ ರೈಲ್ವೆ ಕ್ರಾಸಿಂಗ್ನಲ್ಲಿ ನಿಂತಿದ್ದ ರೈಲನ್ನು ಏರಿ ಪ್ರಯಾಣಿಕರಿಂದ ಹಣ, ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದಾರೆ. ನಕಲಿ ಪಿಸ್ತೂಲ್ ಹಿಡಿದೇ ಇವರು ಪ್ರಯಾಣಿಕರನ್ನು ಬೆದರಿಸಿದ್ದರು ಎನ್ನಲಾಗಿದೆ.