2012ರಿಂದ ತಾವು ಹೊಂದಿದ್ದ ಫ್ಯಾನ್ಸಿ ಮೊಬೈಲ್ ಸಂಖ್ಯೆಯನ್ನ ತಮ್ಮ ಅನುಮತಿಯಿಲ್ಲದೇ ಹೊರ ರಾಜ್ಯದ ಗ್ರಾಹಕರಿಗೆ ನೀಡಿದ ಸೆಲ್ಫೋನ್ ಸರ್ವೀಸ್ ಪ್ರೊವೈಡರ್ ವಿರುದ್ಧ ಬೆಂಗಳೂರಿನ ವ್ಯಕ್ತಿಯೊಬ್ಬರು ಮೂರು ವರ್ಷದಿಂದ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ದೊರಕಿದೆ.
ಮೂರು ವರ್ಷಗಳ ಕಾಲ ವಾದ – ವಿವಾದವನ್ನ ಆಲಿಸಿದ ನಗರ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ಕಂಪನಿಯೂ 52 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.
ಬಿಟಿಎಂ ಲೇ ಔಟ್ ಫಸ್ಟ್ ಸ್ಟೇಜ್ ನಿವಾಸಿಯಾದ 33 ವರ್ಷದ ಪವನ್ ಸಿಂಗ್ ಎಂಬವರು ತಮ್ಮ ಮೂರು ಸೆಲ್ಫೋನ್ ನಂಬರ್ಗಳೂ 76767ನಿಂದ ಆರಂಭವಾಗುವ ಹಾಗೆ ಮಾಡಿಕೊಂಡಿದ್ದರು. ಉದ್ಯಮಕ್ಕೆ ಅನುಕೂಲವಾಗಿ ಎಂಬ ದೃಷ್ಟಿಯಿಂದ ಪವನ್ ಈ ರೀತಿ ಮೂರು ಫ್ಯಾನ್ಸಿ ನಂಬರ್ಗಳನ್ನ ಹೊಂದಿದ್ರು.
ಆದರೆ 2017ರ ನವೆಂಬರ್ 8ನೇ ತಾರೀಖಿನಂದು ವೋಡಾಫೋನ್ ಕಂಪನಿಗೆ ಕರೆ ಮಾಡಿದ್ದ ಪವನ್ ತಮ್ಮ ಮೂರು ರಿಲಾಯನ್ಸ್ ಸಿಮ್ಗಳನ್ನ ಪೋರ್ಟ್ ಮಾಡುವಂತೆ ಮನವಿ ಮಾಡಿದ್ರು.
ಆದರೆ ಇದಾದ ಬಳಿಕ ತನ್ನ 2 ಮೊಬೈಲ್ ಸಂಖ್ಯೆಯನ್ನ ಆಂಧ್ರ ಪ್ರದೇಶ ಹಾಗೂ ಇನ್ನೊಂದು ಸಂಖ್ಯೆಯನ್ನ ಹರಿಯಾಣದಲ್ಲಿರುವ ಬೇರೆಯ ಗ್ರಾಹಕರಿಗೆ ನೀಡಿರುವ ವಿಚಾರ ಪವನ್ ಗಮನಕ್ಕೆ ಬಂದಿದೆ. ಇದಾದ ಬಳಿಕ ಹೊಸ ಸರ್ವೀಸ್ ಪ್ರೊವೈಡರ್ಗೆ ಕರೆ ಮಾಡಿದ ಪವನ್ ಈ ಸಮಸ್ಯೆ ಸರಿಪಡಿಸಿಕೊಡಿ ಎಂದು ಕೇಳಿದ್ದರು.