ಆನ್ಲೈನ್ನಲ್ಲಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದ ಮಹಿಳೆಗೆ ಸೈಬರ್ ಕಳ್ಳರು ಬರೋಬ್ಬರಿ 8 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದು ಈ ಸಂಬಂಧ ಬೆಂಗಳೂರು ಮೂಲದ ಮಹಿಳಾ ಉದ್ಯಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉದ್ಯಮವನ್ನು ನಡೆಸುತ್ತಿದ್ದ ಮಹಿಳೆಗೆ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಹಣದ ಅವಶ್ಯಕತೆ ಇತ್ತು. ಇದೇ ಸಂದರ್ಭದಲ್ಲಿ ಆಕೆ ಆನ್ಲೈನ್ನಲ್ಲಿ ಕಿಡ್ನಿ ದಾನಿಗಳು ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ನೋಡಿದ್ದಾರೆ.
ಜಾಹೀರಾತಿನಲ್ಲಿ ನಮೂದಿಸಲಾಗಿದ್ದ ಸಂಖ್ಯೆಗೆ ಮಹಿಳೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಮತ್ತೊಬ್ಬ ಮಹಿಳೆ ತಮ್ಮನ್ನ ತಾವು ಡಾ. ಸೀಮಾ ರೈ ಎಂದು ಪರಿಚಯ ಮಾಡಿಕೊಂಡಿದ್ದರು. ಕಿಡ್ನಿ ದಾನ ಮಾಡಿದವರಿಗೆ 1 ಕೋಟಿ ರೂಪಾಯಿ ಹಣ ನೀಡೋದಾಗಿ ಹೇಳಿದ್ದರು. ಆದರೆ ಸೀಮಾ ಎಂದು ಹೇಳಿಕೊಂಡ ಮಹಿಳೆ ವಿವಿಧ ಶುಲ್ಕಗಳ ಹೆಸರನ್ನು ಹೇಳಿ ದೂರುದಾರ ಮಹಿಳೆಯಿಂದ ಹಣ ಪೀಕಲು ಆರಂಭಿಸಿದ್ದಳು.
ಏಪ್ರಿಲ್ನಿಂದ ಆಗಸ್ಟ್ ತಿಂಗಳೊಳಗಾಗಿ ಮಹಿಳೆಯು ಬರೋಬ್ಬರಿ 8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮಹಿಳೆಯು, ಸೀಮಾ ರೈ ಎಂಬಾಕೆ ನನಗೆ ಕಿಡ್ನಿ ದಾನ ಮಾಡಿದಲ್ಲಿ 1 ಕೋಟಿ ರೂಪಾಯಿ ನೀಡೋದಾಗಿ ನಂಬಿಸಿದ್ದರು. ಇದಾದ ಬಳಿಕ ದಾನಿಯ ಜಾಗದಲ್ಲಿ ಹೆಸರು ನೋಂದಾಯಿಸಲು 6999 ರೂಪಾಯಿ ಶುಲ್ಕ ಭರಿಸುವಂತೆ ಹೇಳಿದ್ದರು. ಇದಾದ ಬಳಿಕ ವಿವಿಧ ಕಾರಣ ನೀಡಿ ಹಣ ಪೀಕುತ್ತಲೇ ಹೋಗಿದ್ದಾರೆ ಎಂದು ಹೇಳಿದ್ರು.