20 ವರ್ಷದ ಯುವಕನೊಬ್ಬ ತಂದೆಯಿಂದ ಹಣ ಪೀಕುವ ಸಲುವಾಗಿ ತನ್ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಸುಳ್ಳು ನಾಟಕವಾಡಿದ ಶಾಕಿಂಗ್ ಘಟನೆಯೊಂದು ಬೆಂಗಳೂರಿನ ಕುರುಬರಹಳ್ಳಿಯ ಮಹಾಲಕ್ಷ್ಮೀಪುರಂನಲ್ಲಿ ಸಂಭವಿದೆ.
ಸ್ಮಾರ್ಟ್ ಫೋನ್ ಹಾಗೂ ಬ್ರ್ಯಾಂಡೆಡ್ ಬಟ್ಟೆಗಳನ್ನು ಖರೀದಿಸುವ ಸಲುವಾಗಿ ಯುವಕ 3 ಲಕ್ಷ ರೂಪಾಯಿ ಸಾಲ ಮಾಡಿದ್ದನು.
20 ವರ್ಷದ ಯುವಕನನ್ನು ಮಖ್ತುಮ್ ಸಾಬ್ ಎಂದು ಗುರುತಿಸಲಾಗಿದೆ. ಮಹಾಲಕ್ಷ್ಮೀಪುರಂನ ನಿವಾಸಿಯಾಗಿದ್ದ ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.
ಈ ಯುವಕ ತನ್ನ ಗರ್ಲ್ಫ್ರೆಂಡ್ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದ. ಆದರೆ ಆಕೆ ಆಗಸ್ಟ್ ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು.
ಸ್ಮಾರ್ಟ್ ಫೋನ್ ಹಾಗೂ ಬ್ರ್ಯಾಂಡೆಡ್ ಬಟ್ಟೆಗಳ ಖರೀದಿಗಾಗಿ ತಾನು ಹಣವನ್ನು ಖರ್ಚು ಮಾಡಿದ್ದಾಗಿ ಮಖ್ತುಮ್ ಪೊಲೀಸರ ಎದುರು ಹೇಳಿದ್ದಾನೆ. ಸೆಪ್ಟೆಂಬರ್ 13ರಂದು ಮಖ್ತುಮ್ ತಂದೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಅಪಹರಣಕಾರರು ತಮ್ಮ ಮಗನನ್ನು ಕಿಡ್ನಾಪ್ ಮಾಡಿದ್ದು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ದೂರಿನಲ್ಲಿ ತಮ್ಮ ಪುತ್ರ ಸೆಪ್ಟೆಂಬರ್ 12ರಂದು ಮನೆಬಿಟ್ಟಿದ್ದು ಈತನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಉಲ್ಲೇಖಿಸಿದ್ದರು.
ತಮ್ಮ ಪುತ್ರನನ್ನು 5-6 ಮಂದಿ ಸೇರಿ ಅಪಹರಣ ಮಾಡಿದ್ದು 5 ಲಕ್ಷ ರೂಪಾಯಿಗೆ ಬೇಡಿಕೆಯೊಡ್ಡಿ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ ಎಂದು ತಂದೆ ಪೊಲೀಸರಿಗೆ ಹೇಳಿದ್ದರು. ಡಿಜಿಟಲ್ ಪೇಮೆಂಟ್ ಮೂಲಕ ಹಣ ನೀಡುವಂತೆ ಅಪಹರಣಕಾರರು ಹೇಳಿದ್ದರು ಎನ್ನಲಾಗಿದೆ.
ಈ ಪ್ರಕರಣದ ಸಂಬಂಧ ಮಾಹಿತಿ ನೀಡಿದ ಪೊಲೀಸ್ ಉಪ ಕಮಿಷನರ್ ಧರ್ಮೇಂದರ್ ಕುಮಾರ್ ಮೀನಾ, ಯುವಕನು ತಿರುಪತಿ ತಲುಪಿದ್ದ. ತಾನೇ ಡ್ರೈವ್ ಮಾಡಿಕೊಂಡು ಕಾರಿನಲ್ಲಿ ಇಲ್ಲಿಯವರೆಗೆ ಬಂದಿದ್ದ. ಆಗಲೇ ನಮಗೆ ಈ ಪ್ರಕರಣದಲ್ಲಿ ಬೇರೇನೋ ಇದೆ ಎಂಬ ಅನುಮಾನ ಮೂಡಿತ್ತು ಎಂದು ಹೇಳಿದರು.