ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಹೆಚ್ಚಾಗಿ ಚಂದ ಕಾಣಬೇಕೆಂದು ಎಲ್ಲರೂ ಆಸೆ ಪಡುತ್ತಾರೆ. ಪಾರ್ಲರ್ ಗೆ ಹೋಗಲು ಇಷ್ಟಪಡದೆ ಇರುವವರು ಮನೆಯಲ್ಲಿ ಸಣ್ಣ ಸಣ್ಣ ಸಲಹೆಗಳನ್ನು ಪಾಲಿಸಿದರೆ ತ್ವಚೆಯ ಹೊಳಪು ಹೆಚ್ಚಾಗುತ್ತದೆ. ಹೇಗೆ ಗೊತ್ತಾ.
* ಹಸಿ ಹಾಲಿನಲ್ಲಿ ಕೆಲವು ಓಟ್ಸ್ ಅನ್ನು ನೆನೆಸಿಡಬೇಕು. ಆನಂತರ ಅದಕ್ಕೆ ಅರ್ಧ ಚಮಚ ಜೇನು, 2 ಚಮಚ ಕಪ್ಪು ದ್ರಾಕ್ಷಿ ರಸ, ಎರಡು ಹನಿ ಆಲೀವ್ ಆಯಿಲ್ ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ತಿಕ್ಕಬೇಕು. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಶುಭ್ರವಾಗಿ ತೊಳೆಯಬೇಕು. ಈ ಪ್ಯಾಕ್ ಮುಖದ ಮೇಲಿರುವ ಮಲಿನವನ್ನೆಲ್ಲಾ ಶುಭ್ರಗೊಳಿಸಿ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ.
* ಹಾಲಿನ ಕೆನೆಗೆ ಚಿಟಿಕೆ ಅರಿಶಿಣ, ಸ್ವಲ್ಪ ಸಕ್ಕರೆ ಬೆರೆಸಿ ಮುಖಕ್ಕೆ ಹಾಕಿ ಸ್ಕ್ರಬ್ ಮಾಡಬೇಕು. ಹೀಗೆ ಮಾಡುವುದರಿಂದ ಚರ್ಮದ ಮೇಲಿರುವ ಮೃತ ಕಣಗಳು ತೊಲಗಿ ತ್ವಚೆಯು ಮೃದುವಾಗುತ್ತದೆ.
* ಕಣ್ಣಿನ ಕೆಳಗೆ ಕಪ್ಪಾಗಿದ್ದರೆ ಟೊಮೇಟೊ ರಸಕ್ಕೆ ಎರಡು ಹನಿ ಗುಲಾಬಿ ನೀರು, ಒಂದು ಚಮಚ ಹಾಲು ಬೆರೆಸಿ ಮಿಶ್ರಣವನ್ನು ಸ್ವಲ್ಪ ಸಮಯ ಫ್ರಿಡ್ಜ್ ನಲ್ಲಿ ಇರಿಸಬೇಕು. ಅದರೊಳಗೆ ಹತ್ತಿಯನ್ನು ಅದ್ದಿ ಕಣ್ಣುಗಳ ಕೆಳಗಿನ ಕಪ್ಪು ಗೆರೆಗಳಿಗೆ ಹಚ್ಚಿ ಮಸಾಜ್ ಮಾಡಬೇಕು.
* ಟ್ಯಾನ್ ಹೋಗಲಾಡಿಸಲು ಸವತೆಕಾಯಿ ರಸಕ್ಕೆ ಸ್ವಲ್ಪ ಹಾಲು, ಬಾದಾಮಿ ಪುಡಿ, ನಿಂಬೆರಸ ಸ್ವಲ್ಪ, ಕಡಲೆ ಹಿಟ್ಟು ಬೆರೆಸಿ ದೇಹಕ್ಕೆಲ್ಲಾ ಹಚ್ಚಿ ತಿಕ್ಕಿ ಕೊಳ್ಳಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಸೌಂದರ್ಯ ಹೆಚ್ಚಾಗುತ್ತದೆ.