alex Certify ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಣೆಗೆ ಮಹತ್ವದ ಕ್ರಮ: ಸಚಿವ ಬಿ.ಸಿ. ನಾಗೇಶ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಣೆಗೆ ಮಹತ್ವದ ಕ್ರಮ: ಸಚಿವ ಬಿ.ಸಿ. ನಾಗೇಶ್ ಸೂಚನೆ

ಶಿವಮೊಗ್ಗ: ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಉತ್ತಮಪಡಿಸಲು ಬಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಡಿಡಿಪಿಐ ಮತ್ತು ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಗುಣಮಟ್ಟವನ್ನು ನಿರಂತರವಾಗಿ ಗಮನಿಸಬೇಕು. ತರಗತಿಯಲ್ಲಿ ಕುಳಿತುಕೊಂಡು ಶಿಕ್ಷಕರ ಬೋಧನಾ ಮಟ್ಟವನ್ನು ಗಮನಿಸಿ ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಈ ವರ್ಷ ಮಾಡಿದ ರೀತಿಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳಲ್ಲೂ ಮಾಡಬೇಕು ಎಂದರು.

ಶಾಲೆಗಳಲ್ಲಿ ಲಭ್ಯವಿರುವ ಮೂಲಸೌಲಭ್ಯಗಳನ್ನು ಅನುಸರಿಸಿ ಶಾಲೆಗಳನ್ನು ಎ, ಬಿ ಮತ್ತು ಸಿ ಕೆಟಗರಿಯಲ್ಲಿ ಗುರುತಿಸಲಾಗುತ್ತಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂದಿನ ಒಂದು ವರ್ಷದ ಒಳಗಾಗಿ ಬಿ ಕೆಟಗರಿಯಲ್ಲಿರುವ ಎಲ್ಲಾ ಶಾಲೆಗಳನ್ನು ಎ ಕೆಟಗರಿಗೆ ಮೇಲ್ದರ್ಜೆಗೇರಿಸಬೇಕು. ಇಲಾಖಾ ಅನುದಾನ ಮಾತ್ರವಲ್ಲದೆ, ಉದ್ಯೋಗ ಖಾತ್ರಿ ಯೋಜನೆ, ಜೆಎಂಎಂ ಯೋಜನೆಯ ಲಾಭವನ್ನು ಪಡೆದುಕೊಂಡು ಪ್ರತಿ ಶಾಲೆಗೆ ಕುಡಿಯುವ ನೀರು, ಶೌಚಾಲಯ, ಕಂಪೌಂಡ್, ಆಟದ ಮೈದಾನ ವ್ಯವಸ್ಥೆಯನ್ನು ಮಾಡಬೇಕು ಎಂದು ಹೇಳಿದರು.

ಶಾಲೆಗೆ ದಾಖಲಾಗುವ ಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿಸುವ ಪ್ರಕರಣಗಳ ಮೇಲೆ ನಿಗಾ ವಹಿಸಬೇಕು.  ವಿಶೇಷವಾಗಿ 5ನೇ ತರಗತಿ ಬಳಿಕ ಹಲವು ಮಕ್ಕಳು ವಿದ್ಯಾಭ್ಯಾಸ ಮುಂದುವರೆಸದೇ ಇರುವ ಬಗ್ಗೆ ಪರಿಶೀಲಿಸಬೇಕು. ಅಂತಹ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ವಿಶೇಷ ದಾಖಲಾತಿ ಅಭಿಯಾನ ನಡೆಸಬೇಕು. ಇದೇ ರೀತಿ ಎಸ್‍ಎಸ್‍ಎಲ್‍ಸಿಯಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ ಬಳಿಕ ಪರೀಕ್ಷೆಗೆ ಹಲವಾರು ವಿದ್ಯಾರ್ಥಿಗಳು ಹಾಜರಾಗದಿರಲು ಕಾರಣ ಪತ್ತೆ ಮಾಡಬೇಕು. ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸಾವಿರಕ್ಕೂ ಅಧಿಕ ಮಕ್ಕಳು ಈ ರೀತಿ ಪರೀಕ್ಷೆಗೆ ಗೈರು ಹಾಜರಾಗಿರುವುದು ಕಳವಳಕಾರಿ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳ ಆರ್‍ಟಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಒಂದು ತಿಂಗಳ ಒಳಗಾಗಿ ಶಾಲೆಗಳ ಆರ್‍ಟಿಸಿ ಕುರಿತು ಮಾಹಿತಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಆಪ್ತ ಕಾರ್ಯದರ್ಶಿ ಎ.ಆರ್. ರವಿ, ಇಲಾಖೆಯ ಜಂಟಿ ನಿರ್ದೇಶಕ ಕೆಂಚೇಗೌಡ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...