ತೆರಿಗೆ ವಂಚಕರ ವಿರುದ್ಧ ಬಿಬಿಎಂಪಿ ಸಮರ ಮುಂದುವರಿದಿದೆ. ಆಸ್ತಿ ತೆರಿಗೆ ಕಟ್ಟುವಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ಗೆ ಈಗಾಗಲೇ ಬಿಬಿಎಂಪಿ ಸಾಕಷ್ಟು ಬಾರಿ ವಾರ್ನಿಂಗ್ ನೀಡಿದೆ. ಆದರೆ ಪಾಲಿಕೆಯ ಎಚ್ಚರಿಕೆಗೆ ಕ್ಯಾರೇ ಎನ್ನದ ಮಂತ್ರಿ ಮಾಲ್ಗೆ ಇಂದೇ ಬಿಬಿಎಂಪಿ ಬೀಗ ಜಡಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್ 2018ರಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಹಲವು ಬಾರಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸಿದೆ. ಆದರೆ ಪಾಲಿಕೆಯ ನೋಟಿಸ್ಗೆ ಮಂತ್ರಿ ಮಾಲ್ನಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಇಂದೇ ಮಂತ್ರಿ ಮಾಲ್ಗೆ ಪಶ್ಚಿಮ ವಲಯ ಪಾಲಿಕೆ ಜಂಟಿ ಆಯುಕ್ತ ಡೆಡ್ಲೈನ್ ನೀಡಿದ್ದಾರೆ.
ಪ್ರತಿಷ್ಠಿತ ಮಂತ್ರಿ ಮಾಲ್ ಪಾಲಿಕೆಗೆ ಬರೋಬ್ಬರಿ 30,09,57,445 ರೂಪಾಯಿ ಆಸ್ತಿ ತೆರಿಗೆ ಪಾವತಿ ಮಾಡಬೇಕಿದೆ. ಇಂದು ಸಂಜೆಯೊಳಗಾಗಿ ಈ ಹಣವನ್ನು ಕಟ್ಟದೇ ಹೋದಲ್ಲಿ ಮಂತ್ರಿ ಮಾಲ್ಗೆ ಪಾಲಿಕೆ ಬೀಗ ಜಡಿಯುವುದು ಪಕ್ಕಾ ಎನ್ನಲಾಗಿದೆ. ಕನಿಷ್ಟ 1 ವರ್ಷದ ಆಸ್ತಿ ತೆರಿಗೆ ಪಾವತಿ ಮಾಡದೇ ಹೋದಲ್ಲಿ ನಾಳೆಯಿಂದ ಮಾಲ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ. ಆಸ್ತಿ ತೆರಿಗೆ ಪಾವತಿಗೆ ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.