
ಮಹಾರಾಷ್ಟ್ರದ ದಹಿಸರ್ ನ ಬ್ಯಾಂಕ್ ದರೋಡೆ ಪ್ರಕರಣವನ್ನ ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಇಬ್ಬರು ಮುಸುಕುಧಾರಿಗಳು ದಹಿಸರ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನುಗ್ಗಿ ಓರ್ವ ಉದ್ಯೋಗಿಯನ್ನ ಕೊಂದು, ಎರಡೂವರೆ ಲಕ್ಷ ಹಣ ದೋಚಿದ್ದಾರೆ. ಈ ಘಟನೆಯಾದ ಕೆಲವು ಗಂಟೆಗಳಲ್ಲೆ, ಪೊಲೀಸರು ಮುಸುಕುಧಾರಿಗಳನ್ನ ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಇನ್ನೂ ಅವರ ಗುರುತನ್ನು ಬಹಿರಂಗಪಡಿಸಿಲ್ಲ ಆದರೆ ದಾಳಿಕೋರರಿಬ್ಬರೂ ಸ್ಥಳೀಯರು ಎಂದು ಹೇಳಿದ್ದಾರೆ.
ಪ್ರಕರಣವನ್ನು ಭೇದಿಸಲು ಎಂಟು ತಂಡಗಳನ್ನು ರಚಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಕೋರರಲ್ಲಿ ಒಬ್ಬನು ತನ್ನ ಒಂದು ಚಪ್ಪಲಿಯನ್ನು ಬ್ಯಾಂಕ್‌ನಲ್ಲಿ ಬಿಟ್ಟು ಹೋಗಿದ್ದೇ ಅವರ ಬಂಧನಕ್ಕೆ ಕಾರಣವಾಗಿದೆ. ಅವನನ್ನು ಪತ್ತೆಹಚ್ಚಲು ಪೊಲೀಸರು ಸ್ನಿಫರ್ ಡಾಗ್‌ನ ಸಹಾಯ ಪಡೆದಿದ್ದಾರೆ. ಕೊಲೆ ಮತ್ತು ಶಸ್ತ್ರಾಸ್ತ್ರ ದರೋಡೆ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹ ಸಮಾರಂಭಗಳಿಗೂ ಇದೆ ವಿಮೆ…! ಯಾವೆಲ್ಲ ನಷ್ಟ ಕವರ್ ಆಗುತ್ತೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಘಟನೆಯಲ್ಲಿ, ಎಸ್‌ಬಿಐನ ಉದ್ಯೋಗಿಯಾಗಿದ್ದ 25 ವರ್ಷದ ಸಂದೇಶ್ ಗೋಮನೆ ದಾಳಿಕೋರರು ಸಮೀಪದಿಂದ ಅವರ ಮೇಲೆ ಗುಂಡು ಹಾರಿಸಿದ ನಂತರ ಸಾವನ್ನಪ್ಪಿದ್ದಾರೆ. ಬುಧವಾರ ಮಧ್ಯಾಹ್ನ 3.27ಕ್ಕೆ ಈ ಘಟನೆ ನಡೆದಿದ್ದು, ಇಬ್ಬರು ಮುಸುಕುಧಾರಿಗಳು ಬಂದೂಕು ಹಿಡಿದುಕೊಂಡು ರೈಲ್ವೇ ನಿಲ್ದಾಣದ ಬಳಿಯ ದಹಿಸರ್ ವೆಸ್ಟ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಪ್ರವೇಶಿಸಿದ್ದಾರೆ. ಅರ್ಧ ಮುಚ್ಚಿದ್ದ ಬ್ಯಾಂಕ್ ಶೆಟರ್ ಎಳೆದುಕೊಂಡು ಇಬ್ಬರು ಆರೋಪಿಗಳು ಒಳಗೆ ಪ್ರವೇಶಿಸಿದ್ದಾರೆ.
ಆ ಸಮಯದಲ್ಲಿ ಸಾರ್ವಜನಿಕರಿಗೆ ಬ್ಯಾಂಕ್ ನೊಳಗೆ ಬರಲು ಅವಕಾಶವಿಲ್ಲ ಎಂದು ಹೇಳಲು, ಗೋಮನೆ ಅವರ ಬಳಿ ಬಂದರು, ಆದರೆ ಬಂದೂಕು ಹಿಡಿದು ಒಳನುಗ್ಗಿದ ವ್ಯಕ್ತಿ ಅವರ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಬಂದೂಕು ಹಿಡಿದಿದ್ದವನು ತನ್ನ ಬ್ಯಾಗ್ ಅನ್ನು ಕ್ಯಾಷಿಯರ್‌ನತ್ತ ಎಸೆದನು, ನಂತರ ಅವನ ಸಹಚರನು ಹಿಂದಿನಿಂದ ಕ್ಯಾಷಿಯರ್‌ನ ಟೇಬಲ್‌ಗೆ ಹೋಗಿ ಡ್ರಾಯರ್‌ನಿಂದ ಹಣವನ್ನು ತನ್ನ ಬ್ಯಾಗ್‌ಗೆ ಹಾಕಿದ್ದ. ಬ್ಯಾಂಕ್ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಇಡೀ ಘಟನೆ ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 2.5 ಲಕ್ಷ ರೂಪಾಯಿ ನಗದು ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.