ಕಳೆದ ಹಣಕಾಸು ವರ್ಷದಲ್ಲಿ ಬಹುಪಾಲು ಭಾರತೀಯರು ಎದುರಿಸುತ್ತಿರುವ ಬ್ಯಾಂಕಿಂಗ್ ಸಮಸ್ಯೆಗಳ ಕುರಿತ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ.) ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸಂಬಂಧ ದಾಖಲಾಗುವ ದೂರುಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಇದರೊಂದಿಗೆ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ದೂರುಗಳ ಸಂಖ್ಯೆ ದ್ವಿಗುಣಗೊಂಡಿದೆ. ಇದೇ ಅವಧಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಮತ್ತು ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸಂಬಂಧ ದೂರುಗಳಲ್ಲಿ ಶೇಕಡಾ 12ರಷ್ಟು ಏರಿಕೆಯಾಗಿದ್ದರೆ, ಈ ಹಣಕಾಸು ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ದೂರುಗಳು ಶೇಕಡಾ 53ರಷ್ಟು ಏರಿಕೆಯಾಗಿದೆ.
‘ಅಗಸೆ ಬೀಜ’ ಉಪಯೋಗಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಚಾರವಾಗಿ ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದು, ವಿವಿಧ ವರ್ಗಗಳಲ್ಲಿ ಓಂಬುಡ್ಸ್‌ಮನ್ ಯೋಜನೆಗಳ ಅಡಿಯಲ್ಲಿ ಆರ್.ಬಿ.ಐ. ದಾಖಲಿಸಿದ ಬ್ಯಾಂಕಿಂಗ್ ಸಂಬಂಧಿ ವಂಚನೆಯ ದೂರುಗಳು 2020-21 ರಲ್ಲಿ 1,45,309 ಕ್ಕೆ ಏರಿಕೆಯಾಗಿವೆ. ಈ ದೂರುಗಳ ಮಟ್ಟವು ಅದರ ಹಿಂದಿನ ವಿತ್ತೀಯ ವರ್ಷದಲ್ಲಿ 1,35,448 ರಷ್ಟಿತ್ತು.
“2019-20 ರಿಂದ 2020-21ರ ನಡುವಿನ ಅವಧಿಯಲ್ಲಿ ಎಟಿಎಂ/ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಮೊಬೈಲ್/ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಸಂಬಂಧ ವಂಚನೆಗಳ ದೂರುಗಳನ್ನು ಗಮನಿಸಿದಾಗ, 13.01ಪ್ರತಿಶತದಷ್ಟು ಇಳಿಕೆಯಾಗಿದೆ ಎಂದು ಆರ್.ಬಿ.ಐ. ತಿಳಿಸಿದೆ. ಎಟಿಎಂ/ಡೆಬಿಟ್ ಕಾರ್ಡ್‌ಗಳ ಮೇಲಿನ ದೂರುಗಳಿಗೆ ಸಂಬಂಧಿಸಿದಂತೆ ಮತ್ತು ಮೊಬೈಲ್/ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಂಬಂಧ ದೂರುಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಶೇಕಡಾ 12.01 ಮತ್ತು 52.99 ರಷ್ಟು ಹೆಚ್ಚಳವಾಗಿದೆ,” ಎಂದು ವಿತ್ತ ಸಚಿವರು ಇದೇ ವೇಳೆ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ 6, 2017ರ ತನ್ನ ಸುತ್ತೋಲೆಯ ಪ್ರಕಾರ, ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಿಂದ ಗ್ರಾಹಕರನ್ನು ರಕ್ಷಿಸಲು ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮೇಲ್ಕಂಡಂತಹ ದೂರುಗಳನ್ನು ಪರಿಹರಿಸಲು ಕ್ರಮಗಳನ್ನು ಈ ಮೂಲಕ ಸೂಚಿಸಿದೆ ಎಂದು ಸೀತಾರಾಮನ್ ಇದೇ ವೇಳೆ ಉಲ್ಲೇಖಿಸಿದ್ದಾರೆ.
ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ವಹಿವಾಟುಗಳಿಗಾಗಿ ಆರ್‌ಬಿಐ ಉಲ್ಲೇಖಿಸಿರುವ ಮಾರ್ಗಸೂಚಿಗಳು ಇಂತಿವೆ:
* ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳ ಬಲವರ್ಧನೆ
* ಗ್ರಾಹಕರಿಂದ ಬ್ಯಾಂಕ್‌ಗೆ ಅನಧಿಕೃತ ವಹಿವಾಟುಗಳ ಬಗ್ಗೆ ದೂರು ಸಲ್ಲಿಸಲು ವ್ಯವಸ್ಥೆ
* ಗ್ರಾಹಕರಿಗೆ ಈ ಸಂಬಂಧ ಸೀಮಿತ ಹೊಣೆಗಾರಿಕೆ
* ಗ್ರಾಹಕರ ಶೂನ್ಯ/ಸೀಮಿತ ಹೊಣೆಗಾರಿಕೆಗಾಗಿ ಕಾಲಮಿತಿ
* ಬ್ಯಾಂಕುಗಳ ಮೇಲೆ ಪುರಾವೆ ಸಲ್ಲಿಸುವ ಹೊರೆ
* ಗ್ರಾಹಕರ ರಕ್ಷಣೆಗಾಗಿ ಮಂಡಳಿ-ಅನುಮೋದಿತ ನೀತಿ
* ಅಗತ್ಯತೆಗಳನ್ನು ವರದಿ ಮಾಡುವುದು ಮತ್ತು ಮೇಲ್ವಿಚಾರಣೆ ಮಾಡುವುದು
ಇದಲ್ಲದೇ, ಇದೇ ಜನವರಿ 27 ರಂದು, ಬ್ಯಾಂಕ್‌ಗಳ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ಮತ್ತು ದಕ್ಷತೆಯನ್ನು ಸುಧಾರಿಸಲು ಮತ್ತು ಉತ್ತಮವಾದ ಗ್ರಾಹಕ ಸೇವೆ ಖಾತ್ರಿಪಡಿಸಲು ಬ್ಯಾಂಕುಗಳಲ್ಲಿ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಆರ್.ಬಿ.ಐ. ತಿಳಿಸಿದೆ.