ಟೋಕಿಯೋ ಒಲಿಂಪಿಕ್ಸ್ ನಲ್ಲಿ 65 ಕೆಜಿ ಪುರುಷರ ಫ್ರೀ ಸ್ಟೈಲ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ವಿಶ್ವದ ನಂಬರ್ 2 ಕುಸ್ತಿಪಟು ಭಜರಂಗ್ ಪೂನಿಯಾ ಒಲಿಂಪಿಕ್ಸ್ ಪದಕವನ್ನು ಪಡೆಯಲು ಇನ್ನೊಂದೇ ಹೆಜ್ಜೆ ಸಾಗಬೇಕಿದೆ.
ಇರಾನಿನ ಮೊರ್ತೆಜಾ ಘಿಯಾಸಿ ಚೆಕಾ ಎದುರು 2-1 ಅಂತರದಲ್ಲಿ ಗೆಲುವು ಸಾಧಿಸಿರುವ ಪೂನಿಯಾ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಪೂನಿಯಾರ ಮೊದಲ ಒಲಿಂಪಿಕ್ ಪದಕದ ಕನಸು ನನಸಾಗಲು ಇನ್ನೊಂದೇ ಪಂದ್ಯ ಬಾಕಿ ಉಳಿದಂತಾಗಿದೆ.
ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ ಇರಾನಿನ್ ಚೆಕಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಮುಂದಿನ ಸುತ್ತಿನಲ್ಲಿ ಇರಾನ್ ಆಟಗಾರನನ್ನು ಮಣಿಸುವ ಮೂಲಕ 2-1 ಅಂತರದಲ್ಲಿ ಪೂನಿಯಾ ಗೆಲುವಿನ ನಗೆ ಬೀರಿದರು.
ಇಂದು ಮಧ್ಯಾಹ್ನ 2:55ರ ಸುಮಾರಿಗೆ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಇದರಲ್ಲಿ ಪೂನಿಯಾ ಅಜರ್ಬೈಜಾನಿಯಾದ ಹಾಜಿ ಆಲಿಯಾವ್ ವಿರುದ್ಧ ಸೆಣಸಲಿದ್ದಾರೆ. ಈ ಪದಕದಲ್ಲಿ ವಿಜಯಶಾಲಿಯಾಗುವಲ್ಲಿ ಪೂನಿಯಾ ಯಶಸ್ವಿಯಾದಲ್ಲಿ ಪದಕದ ಪಟ್ಟಿಯಲ್ಲಿ ಪೂನಿಯಾ ಹೆಸರು ದಾಖಲಾಗೋದು ಖಚಿತವಾಗಲಿದೆ.