ಕಟ್ಟಡ ಕಾರ್ಮಿಕರು ಹಳೆಯ ಬಜಾಜ್ ಸ್ಕೂಟರ್ ಅನ್ನು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಅನುಕೂಲ ಆಗುವ ವಿದ್ಯುತ್ಚಾಲಿತ ರಾಟೆಯನ್ನಾಗಿ ಬಳಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಪಂಕಜ್ ಪರೇಖ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ರಸ್ತೆಗಳಲ್ಲಿ ಓಡಿಸುವುದನ್ನು ಬಿಟ್ಟು ಈ ಸ್ಕೂಟರ್ ಅನ್ನು ಹೀಗೂ ಬಳಸಬಹುದೆಂದು ಬಜಾಜ್ ಕೂಡ ಊಹಿಸಿರಲಿಲ್ಲ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ.
ಅವಶ್ಯಕತೆಯು ನಾವೀನ್ಯತೆಯ ತಾಯಿಯಾಗಿದೆ. ಜನರು ಜೀವನವನ್ನು ಸುಲಭಗೊಳಿಸಲು ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಮೂಲಕ ಈ ಗಾದೆಮಾತನ್ನು ಸಾಬೀತು ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಅವರು ಹೇಳಿದ್ದಾರೆ. ವಿಡಿಯೋದಲ್ಲಿ ಬಜಾಜ್ ಸ್ಕೂಟರ್ಗೆ ಹಗ್ಗವನ್ನು ಕಟ್ಟಿ ಅದನ್ನು ರಾಟೆಯ ರೂಪದಲ್ಲಿ ಬಳಕೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಕಟ್ಟಡದ ಮೇಲ್ಭಾಗಕ್ಕೆ ಸಾಮಗ್ರಿಗಳನ್ನು ಕೊಂಡೊಯ್ಯಲು ಬಜಾಜ್ ಸ್ಕೂಟರ್ ಹೀಗೂ ನೆರವಾಗಬಲ್ಲುದು ಎಂಬುದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.