alex Certify ಡಿಜಿಟಲ್ ಮಾದರಿಯಲ್ಲಿ ಶೀಘ್ರ ʻಬಗರ್‍ ಹುಕುಂʼ : ರೈತಸ್ನೇಹಿ ರೂಢಿಗತ, ನಕಾಶೆ ದಾರಿ ಬಿಡಿಸಲು ಕ್ರಮಕ್ಕೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿಟಲ್ ಮಾದರಿಯಲ್ಲಿ ಶೀಘ್ರ ʻಬಗರ್‍ ಹುಕುಂʼ : ರೈತಸ್ನೇಹಿ ರೂಢಿಗತ, ನಕಾಶೆ ದಾರಿ ಬಿಡಿಸಲು ಕ್ರಮಕ್ಕೆ ಸೂಚನೆ

ದಾವಣಗೆರೆ : ಕೃಷಿಗೆ ಪೂರಕವಾದ ರೂಢಿಗತ, ನಕಾಶೆ ದಾರಿಗಳನ್ನು ಬಿಡಿಸಿಕೊಡುವ ಮೂಲಕ ರೈತರು ತಮ್ಮ ಹುಟ್ಟುವಳಿಗಳನ್ನು ಸಾಗಣೆ ಮಾಡಲು ಅನುಕೂಲ ಕಲ್ಪಿಸುವುದು ಎಲ್ಲಾ ತಹಶೀಲ್ದಾರರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನಡೆಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತಸ್ನೇಹಿಯಾಗಿ ಕೆಲಸ ಮಾಡಲು ಈಗಾಗಲೇ ಸರ್ಕಾರ ಸುತ್ತೋಲೆಯ ಮೂಲಕ ರೂಢಿಗತ, ನಕಾಶೆ ರಸ್ತೆಗಳಿದ್ದಲ್ಲಿ ಅವುಗಳನ್ನು ಯಾರಾದರೂ ಮುಚ್ಚಿದರೆ ಅಂತಹ ದಾರಿಯನ್ನು ಬಿಡಿಸಿಕೊಡುವ ಮೂಲಕ ರೈತರು ತಮ್ಮ ಹೊಲಗಳಿಗೆ ಹೋಗಲು ಅನುಕೂಲ ಕಲ್ಪಿಸಬೇಕು. ರೈತರು ಬೆಳೆದ ಬೆಳೆಗಳನ್ನು ಸಕಾಲದಲ್ಲಿ ಕಟಾವು ಮಾಡಿ ಹೊರ ತರದಿದ್ದಲ್ಲಿ ಹಾಳಾಗುವ ಸಂಭವವಿರುತ್ತದೆ. ಆದ್ದರಿಂದ ಸರ್ಕಾರದ ಸುತ್ತೋಲೆಯ ಮೂಲಕ ನಕಾಶೆಯಲ್ಲಿ ಇಲ್ಲದ ದಾರಿ ರೂಢಿಗತವಾಗಿದ್ದಲ್ಲಿ, ಅದನ್ನು ದಾರಿ ಎಂದು ಪರಿಗಣಿಸಿ ಯಾರಾದರೂ ಇದಕ್ಕೆ ಅಡ್ಡಿಪಡಿಸಿದಲ್ಲಿ ಇದನ್ನು ಬಿಡಿಸಿಕೊಡುವ ಜವಾಬ್ದಾರಿ ಕಂದಾಯ ಇಲಾಖೆ ಅಧಿಕಾರಿಗಳದ್ದಾಗಿರುತ್ತದೆ. ಮತ್ತು ನಕಾಶೆ ದಾರಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದಲ್ಲಿ ಕೂಡಲೆ ಆ ದಾರಿಯನ್ನು ತೆರವು ಮಾಡಿಸುವ ಮೂಲಕ ಜನರು ಓಡಾಡಲು ಅವಕಾಶ ಕಲ್ಪಿಸಬೇಕು ಎಂದರು.

 ರೈತರು ತಮ್ಮ ಜಮೀನುಗಳಿಗೆ ಹೋಗಲು ರೂಢಿಗತ, ನಕಾಶೆ ದಾರಿ ಇಲ್ಲದ ಕಾರಣ ಅನೇಕ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಸುತ್ತೋಲೆಯ ಮೂಲಕ ಪರಿಹರಿಸುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಯಾವುದೇ ದೂರು ರೈತರಿಂದ ಬಂದಲ್ಲಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ತಹಶೀಲ್ದಾರ್‍ಗೆ ಸೂಚನೆ ನೀಡಿದರು.

  ಬಗರ್‌ ಹುಕುಂ ಸಮಿತಿ ರಚನೆ; ಬಗರ್‍ಹುಕ್ಕುಂನಡಿ ಜಮೀನು ಮಂಜೂರು ಮಾಡಲು ಮಾಯಕೊಂಡ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿ ಬಗರ್‍ಹುಕ್ಕುಂ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಭೂ ಮಂಜೂರಾತಿಗೆ ನಮೂನೆ-57 ರಲ್ಲಿ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಮಾಡಲು ಸಮಿತಿ ಕಾರ್ಯಾರಂಭ ಮಾಡಬೇಕಾಗಿದೆ. ಈ ಹಿಂದಿಗಿಂತ ಈಗ ಡಿಜಿಟೆಲ್ ಮಾದರಿಯಲ್ಲಿ ಭೂ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ. ಸಾಗುವಳಿ ಮಾಡಲಾಗುತ್ತಿರುವ ಜಮೀನಿಗೆ ಜಿಯೋಫೆನ್ಸಿಂಗ್, ಎಷ್ಟು ವರ್ಷಗಳಿಂದ ಸಾಗುವಳಿ ಮಾಡಲಾಗುತ್ತಿದೆ ಎಂಬ ಸ್ಯಾಟಲೈಟ್ ಛಾಯಾಚಿತ್ರ, ಸರ್ವೆ ಇಲಾಖೆಯಿಂದ ಸಾಗುವಳಿ ಭೂಮಿಗೆ ಸ್ಕೆಚ್ ಪಡೆದು ಸಮಿತಿಯಲ್ಲಿ ಪರಿಶೀಲನೆ ಮಾಡಿದ ನಂತರ ಭೂ ಮಂಜೂರಾತಿ ಮಾಡಲು ನಿಯಮಾವಳಿ ರೂಪಿಸಲಾಗಿದೆ. ಮತ್ತು ಸಮಿತಿ ಸಭೆಯ ನಡಾವಳಿಯನ್ನು ದಾಖಲಿಸುವಾಗ ಡಿಜಿಟಲ್ ಮಾದರಿಯಲ್ಲಿ ದಾಖಲಿಸುವ ಮೂಲಕ ಸಭೆಯಲ್ಲಿ ಭಾಗವಹಿಸುವ ಸದಸ್ಯರ ಹಾಜರಾತಿಯನ್ನು ಬಯೋಮೆಟ್ರಿಕ್ ಮೂಲಕ ಪಡೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

 ರೈತ ಮುಖಂಡರು ಗ್ರಾಮಗಳಲ್ಲಿ ಸ್ಮಶಾನ ಜಾಗದ ಸಮಸ್ಯೆ ಇದೆ ಎಂದಾಗ, ಸ್ಮಶಾನ ಭೂಮಿಯ ಅಭಿವೃದ್ದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ದಿಪಡಿಸಲು ಸಿಇಓ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...