ದೇಶದಲ್ಲಿ ರಸ್ತೆ ಅಪಘಾತಗಳಾಗಲು ಚಾಲಕರ ಬೇಜವಾಬ್ದಾರಿಯೇ ಎಲ್ಲ ಸಮಯದಲ್ಲೂ ಕಾರಣವಾಗಲು ಸಾಧ್ಯವಿಲ್ಲ ಎಂದಿರುವ ಮುಂಬೈ ನ್ಯಾಯಾಲಯ, ಕೆಲವೊಮ್ಮೆ ಅಪಘಾತಗಳಿಗೆ ಕೆಟ್ಟ ರಸ್ತೆಗಳೂ ಮುಖ್ಯ ಕಾರಣವಾಗುವ ಸಾಧ್ಯತೆಯೂ ಇರುತ್ತದೆ ಎಂದಿದೆ.
2010ರಲ್ಲಿ ಪ್ರಯಾಣಿಕರೊಬ್ಬರ ಸಾವಿಗೆ ಕಾರಣರೆಂಬ ಆರೋಪ ಎದುರಿಸುತ್ತಿದ್ದ ಆಟೋರಿಕ್ಷಾ ಚಾಲಕರೊಬ್ಬರನ್ನು ಖುಲಾಸೆಗೊಳಿಸಿದ 68ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, “ಚಾಲಕರ ತಪ್ಪಿಲ್ಲದೇ ಇದ್ದರೂ ಕೆಟ್ಟ ರಸ್ತೆಗಳಿಂದ ಅಪಘಾತವಾಗುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ,” ಎಂದಿದೆ.
ನಟಿ ರಾಧಿಕಾ ಆಪ್ಟೆ ಬಳಿ ಇದೆ 3 ಐಷಾರಾಮಿ ಕಾರು…!
31 ವರ್ಷ ವಯಸ್ಸಿನ ಸೂರಜ್ ಕುಮಾರ್ ವೈಕುಂಠನಾಥ್ ಜೈಸ್ವಾಲ್ ಹೆಸರಿನ ಈ ಚಾಲಕನ ಬೇಜವಾಬ್ದಾರಿ ಚಾಲನೆಯಿಂದಾಗಿ ಸಂತ್ರಸ್ತರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬಸ್ಥರು ದೂರು ಸಲ್ಲಿಸಿದ್ದರು.
ಬೋರಿವಲಿಯ ನ್ಯಾಯಾಲಯದ ನ್ಯಾಯಾಧೀಶರಾದ ಎಪಿ ಖನೋರ್ಕರ್, ಸಂತ್ರಸ್ತರ ಪುತ್ರಿ ಕೊಟ್ಟ ಹೇಳಿಕೆಯನ್ನು ಗಮನಿಸಿದ್ದಾರೆ. ರಸ್ತೆಯ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು ಎಂದು ಸಂತ್ರಸ್ಥರ ಪುತ್ರಿ ಇದೇ ವೇಳೆ ತಿಳಿಸಿದ್ದರು.
“ಆರೋಪಿ ಆಟೋರಿಕ್ಷಾ ಚಾಲನೆ ಮಾಡುತ್ತಿದ್ದ ರಸ್ತೆ ಕೆಟ್ಟದಾಗಿತ್ತು ಎಂಬ ವಿಚಾರ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂಥ ರಸ್ತೆಯ ಕಾರಣದಿಂದ ಚಾಲಕರು ವಾಹನವನ್ನು ಸುಗಮವಾಗಿ ಚಲಿಸಲು ಆಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಚಾಲಕರ ತಪ್ಪೇ ಇಲ್ಲದಿದ್ದರೂ ಅಪಘಾತ ಸಾಧ್ಯತೆಗಳು ಬಹಳ ಇರುತ್ತವೆ. ಇಂಥ ಸಂದರ್ಭದಲ್ಲಿ ಎಲ್ಲಾ ಆಯಾಮಗಳಿಂದಲೂ ಆರೋಪಿ ಈ ಘಟನೆಗೆ ಹೊಣೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಆರೋಪಿಯನ್ನು ಆರೋಪಮುಕ್ತ ಮಾಡಬೇಕಾಗುತ್ತದೆ” ಎಂದು ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಜೂನ್ 7, 2010ರಂದು ಸಂತ್ರಸ್ಥ ನಸೀಮ್ ಅಬೀಬ್ ಬಾಗ್ದಾದಿ ತಮ್ಮ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಮೀರಾ ರಸ್ತೆಯಲ್ಲಿರುವ ಸಂಬಂಧಿಗಳ ಮನೆಗೆ ಹೋಗಲು ಆರೋಪಿಯ ಆಟೋರಿಕ್ಷಾದಲ್ಲಿ ಸಂಚರಿಸುತ್ತಿದ್ದರು.
ಕುಟುಂಬಸ್ಥರ ಪ್ರಕಾರ: ಅತಿ ವೇಗವಾಗಿ ಚಲಿಸುತ್ತಿದ್ದ ಆಟೋರಿಕ್ಷಾ ಗೋರೆಗಾಂವ್ ಪೂರ್ವದ ಆರೇ ಕಾಲೋನಿಯ ಒಪಿ ಕೆರೆ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿಯೇ ಇದ್ದ ಸಿಮೆಂಟ್ ಸ್ತಂಭವೊಂದಕ್ಕೆ ಗುದ್ದಿದ ಪರಿಣಾಮ ಆಟೋರಿಕ್ಷಾ ಪಲ್ಟಿ ಹೊಡೆದಿದ್ದು, ಬಾಗ್ದಾದಿ ಅದರ ಅಡಿಯಲ್ಲಿ ಸಿಲುಕಿದ್ದಾರೆ.
ಕುಟುಂಬಸ್ಥರಿಗೆ ತೀವ್ರ ಗಾಯಗಳಾಗಿದ್ದು, ರಿಕ್ಷಾ ಚಾಲಕ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರನೇ ದಿನ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.
ಬಾಗ್ದಾದಿ ಸಾವಿನ ಬಳಿಕ ಆಟೋರಿಕ್ಷಾ ಚಾಲಕನ ವಿರುದ್ಧ ಬೇಜವಾಬ್ದಾರಿ ಚಾಲನೆಯಿಂದ ಸಾವಿಗೆ ಕಾರಣರಾದ ಆರೋಪ ಹೊರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಅಪಘಾತದಲ್ಲಿ ತಮ್ಮದೇನೂ ತಪ್ಪಿಲ್ಲವೆಂದ ಆಪಾದಿತ ಚಾಲಕ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದರು.