ಕಳೆದ ವರ್ಷ ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಸಂದರ್ಭದಲ್ಲಿ ನಡೆಯಬಾರದ ಸಾಕಷ್ಟು ಘಟನೆಗಳು ನಡೆದಿವೆ. ಸಾವಿರಾರು ಮಂದಿ ತಾಲಿಬಾನ್ ನಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಓಡಿಹೋಗುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಅದೇ ಘಟನೆಯಲ್ಲಿ, ತನ್ನ ಕುಟುಂಬದಿಂದ ದೂರವಾಗಿದ್ದ ಪುಟ್ಟ ಮಗುವೊಂದು ಈಗ ಮತ್ತೆ ತನ್ನ ಕುಟುಂಬಕ್ಕೆ ಸೇರಿದೆ. ಆಗಸ್ಟ್ ಹತ್ತೊಂಬತ್ತರಂದು ನಾಪತ್ತೆಯಾಗಿದ್ದ ಎರಡು ತಿಂಗಳ ಮಗು ಸೋಹೈಲ್ ಅಹ್ಮದಿ, ಶನಿವಾರ ಕಾಬೂಲ್‌ನಲ್ಲಿ ತನ್ನ ಕುಟುಂಬಕ್ಕೆ ಮತ್ತೆ ಸೇರಿದ್ದಾನೆ.
ನವೆಂಬರ್‌ನಲ್ಲಿ ಮಗುವಿನ ಚಿತ್ರಗಳೊಂದಿಗೆ ರೈಟರ್ಸ್ ನಲ್ಲಿ ಪ್ರಕಟವಾದ ವಿಶೇಷ ಕಥೆಯಿಂದ ಮಗು ಮತ್ತೆ ಮನೆ ಸೇರಿದೆ. ಕಾಬೂಲ್ ನಲ್ಲಿ ಕಣ್ಮರೆಯಾದ ಮಗು ಕಾಬೂಲ್‌ನಲ್ಲೆ ನೆಲೆಸಿದೆ ಎಂದು ಕುಟುಂಬಕ್ಕೆ ತಿಳಿದು ಬಂದಿದೆ. ಹಮೀದ್ ಸಫಿ ಎಂಬ 29 ವರ್ಷದ ಟ್ಯಾಕ್ಸಿ ಡ್ರೈವರ್ ಮಗುವನ್ನು ವಿಮಾನ ನಿಲ್ದಾಣದಲ್ಲಿ ಕಂಡು ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಸ್ವಂತ ಮಗುವಂತೆ ಬೆಳಸಿದ್ದಾರೆ.
ಇಷ್ಟು ದಿನಗಳ ಕಾಲ ಮಗುವನ್ನ ಸಾಕಿದ್ದ ಹಮೀದ್ ಈಗ ಅವನನ್ನ ಅವನ ಸ್ವಂತ ಕುಟುಂಬಕ್ಕೆ ಹಸ್ತಾಂತರಿಸಲು ಸಿದ್ಧವಿರಲಿಲ್ಲ. ಅವನು ನನ್ನ ಮಗ ಎಂದು ಹಠ ಹಿಡಿದು ಕುಳಿತಿದ್ದರು. ಅವರನ್ನು ಒಪ್ಪಿಸಲು ಸೋಹೈಲ್ ಕುಟುಂಬ ಹಾಗೂ ತಾಲಿಬಾನ್ ಪೊಲೀಸರು ಸತತ ಏಳು ವಾರಗಳವರೆಗೆ ಹಲವು ಮಾತುಕತೆಗಳನ್ನ ನಡೆಸಿದ್ದಾರೆ, ಮನವಿ ಮಾಡಿದ್ದಾರೆ.
ಆನಂತರ ಹೇಗೊ ಹಮೀದ್ ಅಂತಿಮವಾಗಿ ಮಗುವನ್ನು ಸಂಪೂರ್ಣ ಮನಸ್ಸಿನಿಂದ, ಸಂತೋಷವಾಗಿ ಆತನ ತಾತನಿಗೆ ಹಿಂದಿರುಗಿಸಿದ್ದಾನೆ. ಮಗುವನ್ನ ಪಡೆದಿರುವ ತಾತ, ತಿಂಗಳುಗಳ ಹಿಂದೆ ಯುನೈಟೆಡ್ ಸ್ಟೇಟ್ಸ್‌ಗೆ ಸ್ಥಳಾಂತರಿಸಲ್ಪಟ್ಟ ಅವರ ಪೋಷಕರು ಮತ್ತು ಒಡಹುಟ್ಟಿದವರ ಜೊತೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ಅಪ್ಘಾನಿಸ್ತಾನದ ಎಂಬೆಸಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಸೊಹೈಲ್ ತಂದೆ, ದೇಶವನ್ನ ತಾಲಿಬಾನ್ ವಶಪಡಿಸಿಕೊಂಡ ಮೇಲೆ ಕುಟುಂಬ ಸಮೇತ ವಿಮಾನ ನಿಲ್ದಾಣಕ್ಕೆ ಬಂದು ಅಮೇರಿಕಾಗೆ ಹೋಗಲು ನಿರ್ಧರಿಸಿದರು. ಆದರೆ ಅಲ್ಲಿದ್ದ ಜನಸಂದಣಿಯಲ್ಲಿ, ಎರಡು ತಿಂಗಳ ಮಗುವಿಗೆ ತೊಂದರೆಯಾಗಬಹುದು ಎಂದು ಮಗುವನ್ನ ಅಲ್ಲೇ ಇದ್ದ ಅಮೇರಿಕನ್ ಸೈನಿಕರೊಬ್ಬರಿಗೆ ನೀಡಿದ್ದಾರೆ.
ಕ್ಯೂ ದಾಟಿ ಇನ್ನೊಂದು ಬದಿಗೆ ಹೋದಮೇಲೆ ಮಗುವನ್ನ ಹಿಂಪಡೆಯಬಹುದು ಎಂದುಕೊಂಡಿದ್ದ ಕುಟುಂಬಕ್ಕೆ ಆಘಾತವಾಗಿದ್ದು, ತಾಲಿಬಾನ್ ಸೈನಿಕರು ಬಂದು ಅಲ್ಲಿದ್ದ ಕ್ಯೂ ಅನ್ನು ಚದುರಿಸಿದಾಗ ಹೇಗೊ ಕಷ್ಟಪಟ್ಟು ಮಗುವನ್ನ ಬಿಟ್ಟ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ಮಗುವು ಇಲ್ಲ, ಸೈನಿಕನು ಇರಲಿಲ್ಲ. ಎಷ್ಟು ಹುಡುಕಾಡಿದರು ಮಗು ಸಿಗಲಿಲ್ಲ, ನಮ್ಮ ಮಗ ಬದುಕಿದ್ದಾನೆ ಎಂಬ ನಂಬಿಕೆ ಇದೆ ಎಂದು ಪ್ರಸ್ತುತ ಅಮೇರಿಕಾದಲ್ಲಿ ಸೊಹೈಲ್ ತಂದೆ ರೈಟರ್ಸ್ ಗೆ ಸಂದರ್ಶನ ನೀಡಿದ್ದರು, ಆ ಕಥೆಯಿಂದ ಈಗ ಅಹ್ಮದಿಯವರ ಮಗು ಅವರಿಗೆ ಮರಳಿ ದೊರಕಿದೆ.