ಮುಂಬೈ: ಮುಂಬೈ ಪೊಲೀಸರು ಶುಕ್ರವಾರ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ಕ್ರೈಂ ಬ್ರಾಂಚ್ ರಾಯಗಢ ಜಿಲ್ಲೆಯ ಪನ್ವೇಲ್ ಮತ್ತು ಕರ್ಜತ್ ನಲ್ಲಿ ದಾಳಿ ನಡೆಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಧಿಕಾರಿಗಳ ಪ್ರಕಾರ, ಬಂಧಿತರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಮತ್ತು ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಧಿತ ವ್ಯಕ್ತಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕದಲ್ಲಿದ್ದರು, ಈ ಗ್ಯಾಂಗ್ ಸಿದ್ದಿಕ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪವಿದೆ. ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಬಂಧಿಸಲಾದ ನಾಲ್ವರು ವ್ಯಕ್ತಿಗಳಲ್ಲಿ ಇಬ್ಬರು ಆರೋಪಿ ಶೂಟರ್‌ಗಳು ಸೇರಿದ್ದಾರೆ. ಸ್ಥಳದಲ್ಲಿಯೇ ಪೊಲೀಸರು ಮತ್ತು ದಾರಿಹೋಕರು ಅವರನ್ನು ಹಿಡಿದಿದ್ದಾರೆ.
ಅಕ್ಟೋಬರ್ 12 ರಂದು ಜೀಶನ್ ಸಿದ್ದಿಕ್ ಅವರ ಕಚೇರಿ ಬಳಿ ಮಾಜಿ ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕ್(66) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.