ಚಿಕನ್ ಅಂದರೆ ಮಾಂಸಪ್ರಿಯರ ಬಾಯಲ್ಲಿ ನೀರೂರದೇ ಇರದು. ಆದರೆ ಈಗ ನಾವು ವಿವರಿಸುವ ಈ ಕೋಳಿಯು ನಿಮಗೆ ಭೋಜನಕ್ಕೆ ಯೋಗ್ಯವಾದದ್ದಲ್ಲ.
ಅರೆ..! ಇದೇನಿದು ತಿನ್ನಲು ಬಾರದ ಕೋಳಿ ಯಾವುದು..? ಎಂದು ಯೋಚನೆ ಮಾಡುತ್ತಿದ್ದೀರೇ..? ಹೌದು..! ಈ ಕೋಳಿಯ ಹೆಸರು ಅಯಮ್ ಸೆಮಾನಿ. ಈ ಕೋಳಿಯ ವಿಶೇಷತೆ ಅಂದರೆ ಕಪ್ಪು ಬಣ್ಣದ ಕಣ್ಣು, ರೆಕ್ಕೆ, ಕಾಲುಗಳನ್ನು ಹೊಂದಿದೆ.
ಕೇವಲ ಇದು ಮಾತ್ರವಲ್ಲ ಇವುಗಳ ಅಂಗಾಂಗ, ಮಾಂಸ ಹಾಗೂ ಮೂಳೆ ಎಲ್ಲವೂ ಕಪ್ಪು ಬಣ್ಣದ್ದಾಗಿದೆ.
ನ್ಯಾಷನಲ್ ಜಿಯೋಗ್ರಾಫಿಕ್ ವರ್ಣನೆ ಮಾಡಿರುವಂತೆ ಇವುಗಳು ವಿಶ್ವದ ಅತ್ಯಂತ ಆಳವಾದ ಪಿಗ್ಮೆಂಟೆಡ್ ಕ್ರಿಯೇಚರ್ ಆಗಿವೆ. ಆದರೆ ಹೆಣ್ಣು ಕೋಳಿಗಳು ಇಡುವ ಮೊಟ್ಟೆಗಳು ಮಾತ್ರ ಕಪ್ಪು ಬಣ್ಣದ್ದಲ್ಲ. ಬದಲಾಗಿ ಕೆನೆ ಬಣ್ಣವನ್ನು ಹೊಂದಿವೆ. ಹೀಗಾಗಿ ಈ ಕೋಳಿಯನ್ನು ನೀವು ಸಂಪೂರ್ಣವಾಗಿ ಕಪ್ಪು ಎಂದು ಹೇಳಲೂ ಸಾಧ್ಯವಿಲ್ಲ.
ಈ ವಿಚಿತ್ರ ಕೋಳಿಗಳು ನಿಮಗೆ ಹೆಚ್ಚಾಗಿ ಇಂಡೋನೇಷಿಯಾದಲ್ಲಿ ಕಾಣಸಿಗುತ್ತದೆ. ಫೈಬ್ರೊಮೆಲಾನೋಸಿಸ್ ಎಂಬ ಆನುವಂಶಿಕ ಸ್ಥಿತಿಯಿಂದ ಈ ಕೋಳಿಗಳು ಇಷ್ಟೊಂದು ಗಾಢ ಬಣ್ಣವನ್ನು ಹೊಂದಿದೆ.ಈ ಕೋಳಿಗಳ ಮೂಲ ಜಾವಾ ದ್ವೀಪ ಇರಬಹುದು ಎಂದು ಅಂದಾಜಿಸಲಾಗಿದೆ.
ಕೇವಲ ಅಯಮ್ ಸೆಮಾನಿ ಮಾತ್ರ ಕಪ್ಪು ಮಾಂಸವನ್ನು ಹೊಂದಿಲ್ಲ. ಬದಲಾಗಿ ಸ್ವೀಡನ್ನ ಬೋಹುಸ್ಲಾನ್-ದಾಲ್ಸ್ ಸ್ವಾರ್ಥನಾ, ವಿಯೆಟ್ನಾಂನ ಬ್ಲ್ಯಾಕ್ ಎಚ್ಮಾಂಗ್ ಮತ್ತು ಸಿಲ್ಕಿ ಎಂಬವು ಕೂಡ ಕಪ್ಪು ಒಳಭಾಗವನ್ನು ಹೊಂದಿದೆ.