
ವಿವಿಧ ದೇಶಗಳ ನಿಯಮಗಳು ಕಠಿಣಾತಿ ಕಠಿಣ ಇರುತ್ತದೆ. ದೇಶವನ್ನು ರಕ್ಷಿಸಿಕೊಳ್ಳಲು ಕಠಿಣ ನಿಯಮಗಳು ಅನಿವಾರ್ಯ ಎಂದು ಮುಂದುವರಿದ ದೇಶಗಳು ಸರ್ಮಥಿಸಿಕೊಳ್ಳುತ್ತವೆ. ಇಲ್ಲೊಂದು ಘಟನೆಯಲ್ಲಿ ಮಾಡೆಲ್ ಒಬ್ಬರು ಒಂದು ಸಣ್ಣ ಮಾಹಿತಿ ಮುಚ್ಚಿಟ್ಟರೆಂದು ಅಂದಾಜು ರೂ. 2.13 ಲಕ್ಷ ದಂಡ ಹಾಕಲಾಗಿದೆ.
ಕಸ್ಟಮ್ಸ್ನಲ್ಲಿ ಘೋಷಿಸದೆ ವಿಮಾನದಲ್ಲಿ ಸಬ್ವೇ ಸ್ಯಾಂಡ್ ವಿಚ್ ಅನ್ನು ಕೊಂಡೊಯ್ದಿದ್ದಕ್ಕಾಗಿ ಆಸ್ಟ್ರೇಲಿಯಾದ ಮಾಡೆಲ್ಗೆ 2,664 ಡಾಲರ್ ದಂಡ ವಿಧಿಸಲಾಯಿತು. ಟಿಕ್ಟಾಕ್ ವಿಡಿಯೋದಲ್ಲಿ ಈ ಘಟನೆಯನ್ನು ಹಂಚಿಕೊಂಡ ಪರ್ತ್ ಮೂಲದ ಜೆಸ್ಸಿಕಾ ಲೀ, ಸಿಂಗಾಪುರದಿಂದ ಮನೆಗೆ ಹಿಂದಿರುಗುವಾಗ ತನಗೆ ಭಾರಿ ಪೆನಾಲ್ಟಿ ಬಿತ್ತು ಎಂದು ಹೇಳಿದ್ದಾರೆ.
ಅವರು ಚಿಕನ್ ಮತ್ತು ಲೆಟಿಸ್ ಸ್ಯಾಂಡ್ವಿಚ್ ಅನ್ನು ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಖರೀದಿಸಿದ್ದರು ಮತ್ತು ಅದನ್ನು ವಿಮಾನದಲ್ಲಿ ತಿಂದು ಮುಗಿಸಲು ಉದ್ದೇಶಿಸಿದ್ದರು. ಆದರೆ, ಅರ್ಧದಷ್ಟು ಮಾತ್ರ ತಿನ್ನಲು ಸಾಧ್ಯವಾಗಿತ್ತು.
ಉಳಿದ ಸ್ಯಾಂಡ್ ವಿಚ್ ಅನ್ನು ಹಾಗೇ ಕೊಂಡೊಯ್ದಿದ್ದು, ಆಸ್ಟ್ರೇಲಿಯಾದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸ್ಯಾಂಡ್ವಿಚ್ನಲ್ಲಿ ಚಿಕನ್ ಮತ್ತು ಲೆಟಿಸ್ ಅನ್ನು ಘೋಷಿಸಿಲ್ಲ ಎಂಬುದು ಅಧಿಕಾರಿಗಳು ಕೊಟ್ಟ ಕಾರಣ.
ಲೀ ತೆತ್ತಿರುವ ಭಾರಿ ದಂಡವು ಆಸ್ಟ್ರೇಲಿಯಾದ ಕಟ್ಟುನಿಟ್ಟಾದ ಜೈವಿಕ ಭದ್ರತೆ ಕಾನೂನುಗಳಿಗೆ ಸಂಬಂಧಿಸಿದ್ದಾಗಿದೆ. ಆಕೆಯ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳು ಮತ್ತು ಕಾಮೆಂಟ್ ಗಳಿಸಿದೆ. ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರರು, ಲೀಗೆ ಎಚ್ಚರಿಕೆ ನೀಡಬೇಕಿತ್ತು ಎಂದು ಹೇಳಿದ್ದಾರೆ.
ಸಿಡ್ನಿಯಿಂದ ಅಡಿಲೇಡ್ಗೆ ಗಡಿ ದಾಟುವಾಗ ಕೇವಲ ಬೆರಳೆಣಿಕೆಯಷ್ಟು ದ್ರಾಕ್ಷಿಯನ್ನು ಹೊತ್ತಿದ್ದಕ್ಕಾಗಿ ಪ್ರಯಾಣಿಕರಿಗೆ $400 ಡಾಲರ್ ದಂಡ ವಿಧಿಸಿದ ಅನುಭವವನ್ನು ಒಬ್ಬರು ಹಂಚಿಕೊಂಡಿದ್ದಾರೆ.