ಅಟಲ್ ಪಿಂಚಣಿ ಯೋಜನೆಯ ಇತ್ತೀಚಿನ ಅಪ್ಡೇಟ್ ಪ್ರಕಾರ ಅಕ್ಟೋಬರ್ 1ರಿಂದ ಆದಾಯ ತೆರಿಗೆದಾರರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಅಟಲ್ ಪಿಂಚಣಿ ಯೋಜನೆಗೆ ದಾಖಲಾಗಲು ಅವಕಾಶ ಇರುವುದಿಲ್ಲ.
ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಅಧಿಸೂಚನೆಯನ್ನು ಹೊರಡಿಸಿದೆ. 1 ಅಕ್ಟೋಬರ್, 2022 ರಿಂದ, ಯಾವುದೇ ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಸೇರಲು ಅರ್ಹರಲ್ಲ ಎಂದು ಸ್ಪಷ್ಟವಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 1, 2022 ರ ಮೊದಲು ಯೋಜನೆಗೆ ಸೇರ್ಪಡೆಗೊಂಡ ಚಂದಾದಾರರಿಗೆ ಹೊಸ ಅಧಿಸೂಚನೆಯು ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕೇಂದ್ರವು ಜೂನ್ 1, 2015 ರಂದು ಯೋಜನೆಯನ್ನು ಪರಿಚಯಿಸಿತ್ತು ಎಂಬುದನ್ನು ಗಮನಿಸಬೇಕು. ಯೋಜನೆಯ ಚಂದಾದಾರರು ತಮ್ಮ ಕೊಡುಗೆಗಳ ಆಧಾರದ ಮೇಲೆ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ರೂ. 1,000 ರಿಂದ ರೂ. 5,000 ವರೆಗೆ ಕನಿಷ್ಠ ಖಾತರಿ ಪಿಂಚಣಿ ಪಡೆಯುತ್ತಾರೆ.
ಅಕ್ಟೋಬರ್ 1, 2022 ರಂದು ಅಥವಾ ನಂತರ ಸೇರ್ಪಡೆಗೊಂಡ ಚಂದಾದಾರರು, ಅರ್ಜಿ ಸಲ್ಲಿಸಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಈ ಯೋಜನೆ ಖಾತೆಯನ್ನು ಮುಚ್ಚಲಾಗುತ್ತದೆ ಮತ್ತು ಇಲ್ಲಿಯವರೆಗೆ ಸಂಗ್ರಹಿಸಿದ ಪಿಂಚಣಿ ಹಣವನ್ನು ಅವರಿಗೆ ನೀಡಲಾಗುತ್ತದೆ. ಆದಾಯ ತೆರಿಗೆ ಕಾನೂನಿನಡಿಯಲ್ಲಿ, 2.5 ಲಕ್ಷದವರೆಗಿನ ತೆರಿಗೆಯ ಆದಾಯ ಹೊಂದಿರುವವರು ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ.
ಪ್ರಸ್ತುತ, 18 -40 ವರ್ಷ ವಯಸ್ಸಿನ ಎಲ್ಲಾ ಭಾರತೀಯರು ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗಳ ಮೂಲಕ ಈ ಯೋಜನೆಗೆ ಸೇರಬಹುದು.