ಅಮೆರಿಕವನ್ನೇ ತಲ್ಲಣಗೊಳಿಸಿದ್ದ 9/11 ಭಯೋತ್ಪಾದಕ ದಾಳಿಯ 20ನೇ ವರ್ಷದ ಸ್ಮರಣೆಯ ವೇಳೆ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಆ ದಿನದ ಘಟನಾವಳಿಗಳ ಬಗ್ಗೆ ಮಾತನಾಡಿದ್ದಾರೆ.
ವೈಮಾನಿಕ ದಾಳಿಯಲ್ಲಿ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕಟ್ಟಡಗಳು ನೆಲಸಮವಾಗುವುದನ್ನು ಜಗತ್ತಿನಾದ್ಯಂತ ಮಂದಿ ಕಣ್ಣಾರೆ ಕಾಣುವಂತೆ ಮಾಡಿ ದೊಡ್ಡಣ್ಣನಿಗೆ ಭಾರೀ ಆಘಾತ ನೀಡಿದ್ದ ಈ ದಾಳಿಗೆ ಕಾರಣವಾದ ಅಲ್-ಖೈದಾ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಅಬ್ಬೋಟಾಬಾದ್ ಬಳಿ ಮೇ, 2011ರಲ್ಲಿ ಅಮೆರಿಕನ್ ಪಡೆಗಳು ಹತ್ಯೆಗೈದಿದ್ದವು.
ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ಕೊಟ್ಟಿದ್ದ ಅಫ್ಘಾನಿಸ್ತಾನದ ತಾಲಿಬಾನ್ ವಿರುದ್ಧ ಮುಗಿಬಿದ್ದಿದ್ದ ಅಮೆರಿಕ, 20 ವರ್ಷಗಳ ಬಳಿಕ ಅಫ್ಘನ್ ನೆಲೆಯಿಂದ ತನ್ನ ಸಶಸ್ತ್ರ ಪಡೆಗಳನ್ನು ವಾಪಸ್ ಕರೆಯಿಸಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ.
ಅರಬ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್ ನ್ಯೂಸ್..!
’9/11: ಇನ್ಸೈಡ್ ದಿ ಪ್ರೆಸಿಡೆಂಟ್ಸ್ ವಾರ್ ರೂಂ’ ಹೆಸರಿನ ಡಾಕ್ಯೂಮೆಂಟರಿಯೊಂದರಲ್ಲಿ ಮಾತನಾಡಿರುವ ಬುಶ್, “ನನ್ನ ನಿರ್ಧಾರ ಸರಿಯಾಗಿತ್ತು ಎಂದು ನನಗೆ ಅನಿಸುತ್ತದೆ,” ಎಂದು ಭಯೋತ್ಪಾಕದರ ವಿರುದ್ಧ ಸಮರ ಸಾರುವ ತಮ್ಮ ಸರ್ಕಾರದ ಅಂದಿನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ನಾನು ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೆ. ಅಮೆರಿಕ ಯುದ್ಧಕ್ಕೆ ಇಳಿಯುವ ದೊಡ್ಡ ಆಲೋಚನೆಯಿಂದ ಇವು ಆರಂಭಗೊಂಡಿವೆ. ಮತ್ತು ಈ ನಿರ್ಧಾರಗಳನ್ನು ಕೋಪದಿಂದ ತೆಗೆದುಕೊಂಡಿಲ್ಲ, ಅಮೆರಿಕದ ಜನತೆಯ ರಕ್ಷಣೆಯ ಬಗ್ಗೆ ಮನಸ್ಸಿನಲ್ಲಿ ಗುರಿ ಇಟ್ಟುಕೊಂಡು ತೆಗೆದುಕೊಳ್ಳಲಾಗಿತ್ತು. ನಾನು ಸರಿಯಾಗಿದ್ದೆ ಎಂದು ನನಗೆ ಅನಿಸುತ್ತದೆ,’’ ಎಂದು ಬುಶ್ ತಿಳಿಸಿದ್ದಾರೆ.
“ಈ ದಾಳಿಗಳು ಅಮೆರಿಕದ ಮೇಲೆ ಘಟಿಸಿದ ಬೇರೆ ದಾಳಿಗಳಂತಲ್ಲ. ಈ ಎಲ್ಲವನ್ನೂ ನಿರ್ಧರಿಸಲು ಇತಿಹಾಸಕಾರರಿಗೆ ಬಿಡುತ್ತೇವೆ. ನಾನು ತೆಗೆದುಕೊಂಡ ನಿರ್ಣಯಗಳ ಬಗ್ಗೆ ನನಗೆ ವಿಷಾದವಿಲ್ಲ,” ಎಂದು 9/11ರ ದಾಳಿಯ ಬಳಿಕ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡುವ ಅಮೆರಿಕದ ನಿರ್ಣಯದ ಬಗ್ಗೆ ಮಾತನಾಡಿದ್ದಾರೆ ಬುಶ್.
9/11ರ ಘಟನೆ ವೇಳೆ ಅಪಹರಿಸಲಾದ ವಿಮಾನಗಳ ಬಗ್ಗೆ ಮಾತನಾಡಿದ ಬುಶ್,” ಮೊದಲನೇ ವಿಮಾನ ಅಪಹರಣ ಒಂದು ಅಪಘಾತ ಎನ್ನಬಹುದು, ಎರಡನೇಯದ್ದು ದಾಳಿ ಹಾಗೂ ಮೂರನೇಯದ್ದು ಯುದ್ಧದ ಘೋಷಣೆ,” ಎಂದಿದ್ದಾರೆ.
“ನಾನು ಮೊದಲಿಗೆ ಅದು ಪೈಲಟ್‌ನ ಪ್ರಮಾದ ಎಂದುಕೊಂಡಿದ್ದೆ. ಪೈಲಟ್ ಒಬ್ಬನ ಆಲಸ್ಯದಿಂದ ಹೀಗಾಗಿ ಎಂದು ಕೊಂಡಿದ್ದೆ,” ಎಂದು ಬುಶ್ ತಿಳಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಬುಶ್ ಫ್ಲಾರಿಡಾದಲ್ಲಿ ಸಮಾರಂಭವೊಂದರಲ್ಲಿ ಮಕ್ಕಳೊಂದಿಗೆ ಸಮಾಲೋಚನೆಯಲ್ಲಿದ್ದರು.
“ಆಂಡಿ ಕಾರ್ಡ್ ನನ್ನ ಬಳಿ ಬಂದು, ಎರಡನೇ ವಿಮಾನ ಎರಡನೇ ಗೋಪುರಕ್ಕೆ ಬಡಿದಿದೆ, ಅಮೆರಿಕ ದಾಳಿಗೊಳಗಾಗಿದೆ ಎಂದಿದ್ದಾರೆ. ಮಗುವೊಂದು ಓದುತ್ತಿರುವುದನ್ನು ನೋಡುತ್ತಿದ್ದ ನಾನು ಕೋಣೆಯ ಹಿಂದಿದ್ದ ಮಾಧ್ಯಮಕ್ಕೆ ನನಗೆ ಬಂದ ಸಂದೇಶವೇ ಬಂದಿದೆ ಎಂದು ಅರಿವಾಯಿತು,” ಎಂದು ಬುಶ್ ದಾಳಿಯಾದ ದಿನದ ಬಗ್ಗೆ ಬಿಚ್ಚಿಟ್ಟಿದ್ದಾರೆ.
“ನಾನು ಆ ಘೋರ ದುರಂತವನ್ನು ನೋಡಿದೆ….. ಸುದ್ದಿಮಿತ್ರರಿಗೂ ಅದೇ ಸುದ್ದಿ ಬಂದಿದೆ. ದುರಂತಗಳ ಸಂದರ್ಭದಲ್ಲಿ ಗಾಬರಿಯಾಗದೇ ವಿವೇಚನಾಶೀಲವಾದ ಮನಸ್ಥಿತಿ ಹೊಂದಬೇಕು. ಹೀಗಾಗಿ ಕ್ಲಾಸ್‌ರೂಂ ಆಚೆ ಬರಲು ಸೂಕ್ತ ಸಂದರ್ಭವೊಂದಕ್ಕೆ ಕಾಯುತ್ತಿದ್ದೆ. ಯಾವುದೇ ನಾಟಕೀಯ ಹೆಜ್ಜೆ ಇಡುವುದು ನನಗೆ ಬೇಕಿರಲಿಲ್ಲ. ಮಕ್ಕಳಿಂದ ತುಂಬಿದ್ದ ತರಗತಿಯಲ್ಲಿ ಭಯ ಮೂಡಿಸಲು ನನಗೆ ಇಷ್ಟವಿರಲಿಲ್ಲ, ಹೀಗಾಗಿ ನಾನು ಕಾಯುತ್ತಿದ್ದೆ,” ಎಂದು ದಾಳಿಯಾದ ಕ್ಷಣಗಳಲ್ಲಿ ತಮ್ಮ ಪ್ರತಿಕ್ರಿಯೆ ಹೇಗಿತ್ತು ಎಂಬ ಬಗ್ಗೆ ರಿಪಬ್ಲಿಕನ್ ನಾಯಕ ತಿಳಿಸಿದ್ದಾರೆ.
“ಅವರ ಬಾಯಿ ಆ ಸಂದರ್ಭದಲ್ಲಿ ಬಿಗಿಯಾಗಿಬಿಟ್ಟಿತ್ತು ಹಾಗೂ ಆ ವೇಳೆ ಅವರ ಕಣ್ಣುಗಳಲ್ಲಿ ಸಿಟ್ಟು ಕಾಣಿಸಿಕೊಂಡರೂ ಅವರಲ್ಲಿ ಒಂದು ರೀತಿಯ ತೂಕ ಕಂಡುಬರುತ್ತಿತ್ತು. ಆ ಘಟನೆಯನ್ನು ವಿವೇಚನೆಯಿಂದ ನಿರ್ವಹಿಸುವತ್ತ ಅವರ ಗಮನವಿಡೀ ಕೇಂದ್ರೀಕೃತವಾಗಿತ್ತು,” ಎಂದು ಬ್ಲೂಂಬರ್ಗ್ ವರದಿಗಾರ ರಿಚರ್ಡ್ ಕೀಲ್ ತಿಳಿಸಿದ್ದಾರೆ.
ವಿಶ್ವ ವಾಣಿಜ್ಯ ಸಂಸ್ಥೆಗೆ ಮೊದಲ ವಿಮಾನ ಢಿಕ್ಕಿ ಹೊಡೆದ ಸುದ್ದಿ ಕೇಳಿದ ವೇಳೆ ಬುಶ್ ಜೊತೆಗೆ ಕೀಲ್ ಸಹ ಅದೇ ತರಗತಿಯಲ್ಲಿ ಇದ್ದರು.
ಘಟನೆ ನಡೆದ ಸ್ಥಳದಲ್ಲೇ ಅಧ್ಯಕ್ಷರ ನಿಯಂತ್ರಣ ಕೋಣೆಯನ್ನು ತೆರೆಯಲಾಯಿತು. ಇದಾದ ಬೆನ್ನಿಗೇ ಬುಶ್ ಹಾಗೂ ಇತರರು ಏರ್ ಫೋರ್ಸ್ 1 ವಿಮಾನವೇರಿ ವಾಷಿಂಗ್ಟನ್‌ಗೆ ತೆರಳಿದರು. ವಿಮಾನದೊಳಗೆ ಬುಶ್ ಜೊತೆಗೆ ಅವರ ಭದ್ರತಾ ಸಿಬ್ಬಂದಿ ಮಾತ್ರವೇ ಇದ್ದರು.
’ಏಂಜೆಲ್’ ಹೆಸರಿನ ಕೋಡ್‌ನಿಂದ ಕರೆಯಲಾಗುವ ಏರ್ ಫೋರ್ಸ್ ಒನ್, ಅಂದರೆ ಅಧ್ಯಕ್ಷರಿದ್ದ ವಿಮಾನ, ಭಯೋತ್ಪಾದಕರ ಮುಂದಿನ ಗುರಿ ಎಂಬ ವಿಷಯ ಒಳಗಿದ್ದ ಭದ್ರತಾ ಸಿಬ್ಬಂದಿಗೆ ತಿಳಿದುಬಂದಿದೆ.
ಇದಾದ ಬೆನ್ನಿಗೇ, ವಿಮಾನದೊಳಗಿದ್ದ ಎಲ್ಲ ಸಿಬ್ಬಂದಿಯೂ ತಮ್ಮ ಬಳಿ ಇದ್ದ ಶಸ್ತ್ರಗಳನ್ನು ಕೆಳಗಿಳಿಸುವ ಮೂಲಕ, ವಿಮಾನದೊಳಗೆ ಅನಿರೀಕ್ಷಿತವಾಗಿ ಯಾರೊಬ್ಬರೂ ನಾಟಕೀಯ ದಾಳಿ ನಡೆಸುವ ಸಾಧ್ಯತೆಯನ್ನು ಇಲ್ಲವಾಗಿಸಲಾಯಿತು.
ವಾಷಿಂಗ್ಟನ್ ಡಿಸಿಯಲ್ಲಿ ಕೊನೆಗೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ವಿಮಾನದಲ್ಲಿ ಬಂದಿಳಿದ ಬುಶ್ ಓವಲ್ ಕಚೇರಿಯಿಂದ ಅದೇ ದಿನ ರಾತ್ರಿ 8:30ಕ್ಕೆ ತಮ್ಮ ದೇಶವನ್ನುದ್ದೇಶಿಸಿ ಮಾತನಾಡಿದ್ದರು.