ಬಿಹಾರ ಸಿಎಂ ನಿತೀಶ್ ಕುಮಾರ್ ಜನತಾ ದರ್ಬಾರ್ ನಡೆಸುವ ವೇಳೆ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಪಶ್ಚಿಮ ಚಂಪರಣ್ ಜಿಲ್ಲೆಯ ನಿವಾಸಿಯಾದ ಮಹಿಳೆಯೊಬ್ಬರು ಜೆಡಿ(ಯು) ಶಾಸಕ ತಮ್ಮ ಪತಿಯನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ನಿತೀಶ್ ಕುಮಾರ್ ಇದ್ದ ಸಾರ್ವಜನಿಕ ಸಭೆಗೆ ಆಗಮಿಸಿದ ಮಹಿಳೆ ಕುಮುದಾ ವರ್ಮ, ವಾಲ್ಮಿಕಿ ನಗರದ ಜೆಡಿಯು ಶಾಸಕ ಧೀರೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ರಿಂಕು ಸಿಂಗ್ ತಮ್ಮ ಪತಿ ದಯಾನಂದ ವರ್ಮಾರನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.
ಜನತಾ ದರ್ಬಾರ್ನಲ್ಲಿ ನ್ಯಾಯಕ್ಕಾಗಿ ಸಿಎಂ ನಿತೀಶ್ ಕುಮಾರ್ ಎದುರು ಪರಿ ಪರಿಯಾಗಿ ಬೇಡಿದ್ದಾರೆ. ತಮ್ಮ ಪತಿಯನ್ನು ಕೊಲೆ ಮಾಡಿದ್ದರೂ ಸಹ ಶಾಸಕನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸಿಂಗ್ ಹೆಸರಲ್ಲಿ ಎಫ್ಐಆರ್ ದಾಖಲಾಗಿದೆ, ಹಾಗೂ ಮೂವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ. ಆದರೆ ಸಿಂಗ್ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಕುಮುದಾ ವರ್ಮಾರ ಎಲ್ಲಾ ಆರೋಪಗಳನ್ನು ಕೇಳಿದ ಸಿಎಂ ನಿತೀಶ್ ಕುಮಾರ್, ಬಿಹಾರ ಡಿಜಿಪಿ ಬಳಿ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ರು. ಡಿಜಿಪಿಗೆ ಸೂಚನೆ ನೀಡಿದ್ರೂ ಸಹ ಕುಮುದಾ ಮಾತ್ರ ಸಂತೃಪ್ತಿಗೊಂಡಂತೆ ಕಾಣುತ್ತಿರಲಿಲ್ಲ.
ನನ್ನ ಪತಿಯನ್ನು ನನ್ನ ಕಣ್ಣೆದುರೇ ಕೊಲೆ ಮಾಡಿದ್ದಾರೆ. ಶಾಸಕ ಸಿಂಗ್ ನನ್ನ ಪತಿಯನ್ನು ಶೂಟ್ ಮಾಡುವಂತೆ ಆರ್ಡರ್ ನೀಡಿದ್ದರು. ಪದೇ ಪದೇ ಇದೇ ಮಾತನ್ನು ಹೇಳುತ್ತಿದ್ದ ಮಹಿಳೆ, ರಿಂಕು ಸಿಂಗ್ರನ್ನು ಬಂಧಿಸಿ ಎಂದು ಪರಿ ಪರಿಯಾಗಿ ಬೇಡಿದ್ದಾಳೆ.
ಕುಮುದಾ ವರ್ಮಾ ಪತಿ ದಯಾನಂದ ವರ್ಮಾ ಪಶ್ಚಿಮ ಚಂಪರನ್ನ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು. ಫೆಬ್ರವರಿಯಲ್ಲಿ ದಯಾನಂದ್ರನ್ನು ಸಿರ್ಸಿಯಾ ಚೌಕ್ನಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿತ್ತು. ಈ ಹತ್ಯೆ ಸಂಬಂಧ ಕುಮುದಾ ವರ್ಮಾ, ರಿಂಕು ಸಿಂಗ್ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದರು.