ಗುವಾಹಟಿ: ಅಸ್ಸಾಂ ನ ಗುವಾಹಟಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ನೂರಾರು ಮನೆಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದೆ.
ಗುವಾಹಟಿಯ ಸ್ಲಂ ಪ್ರದೇಶ ಫಟಾಸಿಲ್ ಅಂಬಾರಿಯಲ್ಲಿ ಈ ದುರಂತ ಸಂಭವಿಸಿದ್ದು, ಭಾರೀ ಬೆಂಕಿ ಅವಘಡ ಸಂಭವಿಸಿದೆ. ಏಕಕಾಲದಲ್ಲಿ ಹಲವು ಸಿಲಿಂಡರ್ ಗಳು ಸ್ಫೋಟಗೊಂಡು, ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂದ ಪರಿಣಾಮ ನೂರಾರು ಮನೆಗಳಿಗೆ ಬೆಂಕಿವ್ಯಾಪಿಸಿದ್ದು, ನೋಡ ನೋಡುತ್ತಿದಂತೆ ಮನೆಗಳು ಹೊತ್ತಿ ಉರಿದಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಬೆಂಕಿಯ ಜ್ವಾಲಗೆ ಹೊರಬರಲಾಗದೇ ಜನರು ಪರದಾಡಿದ್ದಾರೆ.
20 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸಂತ್ರಸ್ತರಿಗೆ ಆಹಾರ ಮತ್ತು ವಸತಿ ಸೇರಿದಂತೆ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.