ಕೆಲ ದಿನಗಳ ಹಿಂದಷ್ಟೇ ಆಸ್ಸಾಂನ ಮೆಕ್ಯಾನಿಕ್ ಒಬ್ಬ ಹಳೆಯ ಮಾರುತಿ ಸ್ವಿಫ್ಟ್ ಕಾರನ್ನ ಲ್ಯಾಂಬರ್ಗಿನಿ ಸ್ಪೋರ್ಟ್ಸ್ ಕಾರನ್ನಾಗಿ ಮಾರ್ಪಡಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದರು. ಅಲ್ಲದೇ ಈ ಸಾಧನೆಯ ಮೂಲಕ ಸ್ಥಳೀಯ ಮಟ್ಟದಲ್ಲಿ ಸೆಲೆಬ್ರಿಟಿ ಎನಿಸಿಕೊಂಡಿದ್ದರು.
ಅದೇ ರೀತಿ ಆಸ್ಸಾಂನ ಇನ್ನೊಬ್ಬ ವ್ಯಕ್ತಿ ಇದೀಗ ಮತ್ತೊಂದು ಸಾಧನೆ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಚೋರೈಪಾನಿ ಗ್ರಾಮದ ನಿವಾಸಿಯಾದ ಬುಬುಲ್ ಸೈಕಿಯಾ ಎಂಬವರು ಮೊಟಾರ್ ಸೈಕಲ್ ಎಂಜಿನ್ನ್ನು ಬಳಕೆ ಮಾಡಿ ಸೀಪ್ಲೇನ್ನ್ನು ಕಂಡು ಹಿಡಿದಿದ್ದಾರೆ. ಅಂದ ಹಾಗೆ ಯಾವುದೇ ತಾಂತ್ರಿಕ ತರಬೇತಿಯನ್ನ ಪಡೆಯದೇ ಬುಬುಲ್ ಈ ಸಾಧನೆಯನ್ನ ಮಾಡಿ ತೋರಿಸಿದ್ದಾರೆ.
ವಿಮಾನದಲ್ಲಿ ಹಾರಾಡಬೇಕೆಂಬ ಕನಸನ್ನ ಹೊಂದಿದ್ದ ಬುಬಲ್ ಇದೀಗ ಸೀ ಪ್ಲೇನ್ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಂದಹಾಗೆ ಈ ವಿಮಾನವನ್ನ ಕಂಡುಹಿಡಿಯಲು ಬೇಕಾದ ಎಲ್ಲಾ ಸಾಮಗ್ರಿಗಳನ್ನ ಬುಬುಲ್ ತಮ್ಮ ಸ್ವಂತ ಖರ್ಚಿನಲ್ಲೇ ಹೊಂದಿಸಿದ್ದಾರೆ. ಈ ವಿಮಾನಕ್ಕೆ ಬಜಾಜ್ ಪಲ್ಸರ್ 220ಯ ಇಂಜಿನ್ನ್ನು ಹಾಕಲಾಗಿದೆ.
ಎಲ್ಲರಂತೆ ನಾನೂ ಸಹ ಆಕಾಶದಲ್ಲಿ ಹಾರಾಡುವ ಕನಸನ್ನ ಕಂಡಿದ್ದೆ. ಆಕಾಶದಲ್ಲಿ ಹಾರಾಡಲು ನಾನೇ ಸ್ವಂತ ಒಂದು ಆವಿಷ್ಕಾರ ಮಾಡಬೇಕು ಎಂಬ ಹೆಬ್ಬಯಕೆ ನನಗಿತ್ತು. ಈ ಸಾಧನದ ಮೂಲಕ ನಾನು ಎಷ್ಟು ಮೇಲೆ ಹಾರಾಡುತ್ತೇನೆ ಎಂದು ನೋಡುತ್ತೇನೆ ಎಂದು ಬುಬುಲ್ ಹೇಳಿದ್ದಾರೆ. ಈ ಸಾಧನ ಕಂಡುಹಿಡಿಯಲು ಬುಬುಲ್ 2 ಲಕ್ಷ ರೂಪಾಯಿಗಳನ್ನ ವ್ಯಯಿಸಿದ್ದಾರೆ.