ಇಂದಿನ ಪೀಳಿಗೆಗೆ ಬಿಹು ಉತ್ಸವದ ಝಲಕ್ ತೋರಿಸಲು ಮುಂದಾಗಿರುವ ಬಾಬುಲ್ ಚೇಟಿಯಾ ಎಂಬ ಮಾಜಿ ಮಿಸ್ಟರ್ ಅಸ್ಸಾಂ, ಹಬ್ಬದ ಸಂದರ್ಭದಲ್ಲಿ ರಚಿಸಲಾಗುವ ಬಿದಿರಿನ ಮನೆಗಳಾದ ಮೇಯ್ಜಿಗಳನ್ನು ರಚಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ಮಾಘ ಬಿಹು ಹಬ್ಬದ ಪ್ರಮುಖ ಆಕರ್ಷಣೆಯಾದ ಮೇಯ್ಜಿಗಳನ್ನು ಗುವಾಹಾಟಿಯ ಬೀದಿಗಳಲ್ಲಿಟ್ಟು ಮಾರುತ್ತಿದ್ದಾರೆ ಬಾಬುಲ್.
ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಜನವರಿಯಲ್ಲಿ ಭಾರಿ ರಜೆ – ವ್ಯವಹಾರಗಳಿಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ
“ಅಸ್ಸಾಂನಲ್ಲಿರುವ ಬಿಹಾರಿ ಸಮುದಾಯ ಭಾರೀ ಸಂಭ್ರಮದಿಂದ ಛತ್ ಪೂಜೆ ಆಚರಿಸುವುದನ್ನು ನೋಡಿದಾಗ ನನಗೆ ಹೆಮ್ಮೆಯೆನಿಸುತ್ತದೆ. ಮೆಟ್ರೋ ನಗರಗಳಲ್ಲಿ ವಾಸಿಸುವ ಮಂದಿ ಮಾಘ ಬಿಹು ಸಂದರ್ಭದಲ್ಲಿ ಮೇಯ್ಜಿಗಳನ್ನು ರಚಿಸುವುದಿಲ್ಲವೇಕೆ ಎಂದ ಪ್ರಶ್ನೆ ಇದೇ ವೇಳೆ ನನ್ನಲ್ಲಿ ಏಳುತ್ತದೆ. ಈ ಸಂಪ್ರದಾಯಗಳ ಕುರಿತು ಈ ಜನರು ತಮ್ಮ ಹೆತ್ತವರು ಅಥವಾ ಅಜ್ಜ-ಅಜ್ಜಿಯರಿಂದ ಕೇಳಿ ತಿಳಿದುಕೊಳ್ಳಬೇಕು. ನಗರದಲ್ಲಿ ಬಿದಿರು ಮತ್ತು ಒಣಹುಲ್ಲು ಸಿಗುವುದು ಕಷ್ಟವಾದರೂ ಅಸಾಧ್ಯವಲ್ಲ. ಇವುಗಳನ್ನು ನಾನೇ ರಚಿಸಿದ್ದು, ಕಳೆದ ವರ್ಷದ ಮಾಘ ಬಿಹು ಸಂದರ್ಭದಿಂದ ಮಾರಾಟ ಮಾಡಲು ಆರಂಭಿಸಿದ್ದೇನೆ,” ಎನ್ನುತ್ತಾರೆ ಬಾಬುಲ್ ಚೇಟಿಯಾ.
ಅಹೋಂ ರಾಜಮನೆತನ ಆಳಿದ ಪ್ರದೇಶದಲ್ಲಿರುವ ಶಿಬ್ಸಾಗರ್‌ನ ಡೆಮೌ ನಿವಾಸಿಯಾದ ಬಾಬುಲ್, 1960ರ ದಶಕದಲ್ಲಿ ಗುವಾಹಾಟಿಯಲ್ಲಿ ವಾಸಿಸುತ್ತಿದ್ದರು. ಬಳಿಕ ದೇಹದಾರ್ಡ್ಯದ ಮೇಲೆ ಆಸಕ್ತಿ ಬೆಳೆಸಿಕೊಂಡ ಬಾಬುಲ್ 1989ರಲ್ಲಿ ಮಿಸ್ಟರ್ ಅಸ್ಸಾಂ ಗೌರವಕ್ಕೆ ಪಾತ್ರರಾಗಿದ್ದರು. ಇದಾದ ನಂತರ ಜಿಮ್‌ಗಳಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಾ ಬಂದಿರುವ ಬಾಬುಲ್ ಈಗಲೂ ಗಟ್ಟಿಮುಟ್ಟಾಗಿದ್ದಾರೆ.
ಅಸ್ಸಾಮೀ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಬಾಬುಲ್ ಮಾಘ ಬಿಹು ಹಬ್ಬದ ಆಚರಣೆ ಮೂಲಕ ತಮ್ಮ ನಾಡಿನ ಪರಂಪರೆಯ ಕೊಂಡಿಯೊಂದನ್ನು ಜನರಿಗೆ ಪರಿಚಯಿಸಲು ಮುಂದಾಗಿದ್ದಾರೆ.
ನಮ್ಮಲ್ಲಿ ಆಚರಿಸುವ ಮಕರ ಸಂಕ್ರಾಂತಿಯ ತತ್ಸಮಾನ ಹಬ್ಬವಾದ ಮಾಘ ಬಿಹು ಭತ್ತದ ಕಟಾವಿನ ಬಳಿಕ ಆಚರಿಸಲ್ಪಡುವ ಸುಗ್ಗಿ ಸಂಭ್ರಮವಾಗಿದೆ. ಈ ವೇಳೆ ಭತ್ತದ ಗದ್ದೆಗಳಲ್ಲಿ ಮೇಯ್ಜಿ ಮತ್ತು ಭೇಲಾಘರ್ ಎಂಬ ಎರಡು ರಚನೆಗಳನ್ನು ತಯಾರಿಸುವ ಗ್ರಾಮಸ್ಥರು, ಇವುಗಳ ನಿರ್ಮಾಣಕ್ಕೆ ಬಿದಿರು ಮತ್ತು ಭತ್ತದ ಹುಲ್ಲನ್ನು ಬಳಸುತ್ತಾರೆ.
ಬಿಹು ಸಂದರ್ಭದಲ್ಲಿ ಉರುಕಾ ರಾತ್ರಿ ಎಂಬ ಆಚರಣೆ ಇದ್ದು, ಈ ವೇಳೆ ಜನರು ಸಾಮೂಹಿಕ ಮೀನುಗಾರಿಕೆ ಮಾಡಿ ಹಬ್ಬದೂಟಕ್ಕೆ ಮೀನುಗಳನ್ನು ಸಂಗ್ರಹಿಸಿಕೊಂಡು ಬರುತ್ತಾರೆ. ಊಟ ಮುಗಿದ ಬಳಿಕ ಯುವಕರು ಭೇಲಾಘರ್‌ಗಳಲ್ಲಿ ಉಳಿದುಕೊಂಡು ಮಾರನೇ ದಿನ ಬೆಳಿಗ್ಗೆ ಈ ರಚನೆಗಳನ್ನು ಬೆಂಕಿಗೆ ಆಹುತಿ ಮಾಡಿ ದೇವರಿಗೆ ಅರ್ಪಣೆ ಮಾಡಲಾಗುತ್ತದೆ. ಈ ವೇಳೆ ಸುಗ್ಗಿ ಸಂಭ್ರಮ ಆಚರಸಲೆಂದು ಬಿಹು ಹಬ್ಬದ ತಿನಿಸುಗಳನ್ನು ಅಗ್ನಿಯಲ್ಲಿ ಹಾಕುವ ಮೂಲಕ ಮುಂದಿನ ಕೃಷಿ ಮಾಸದಲ್ಲಿ ಒಳ್ಳೆ ಬೆಳೆ ಬರಲಿ ಎಂದು ಪ್ರಾರ್ಥಿಸಲಾಗುತ್ತದೆ.