ಗೋಲಾಘಾಟ್: 163 ಕೋಟಿ ರೂ.ಗಳ ಮಾದಕ ವಸ್ತುಗಳನ್ನು ಅಸ್ಸಾಂ ಮುಖ್ಯಮಂತ್ರಿ ಸುಟ್ಟು ಹಾಕಿಸಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಹೌದು, ಅಕ್ರಮ ಮಾದಕ ವಸ್ತುಗಳ ಸಾಗಾಟ ವಿರುದ್ಧ ಜನತೆಗೆ ಸಂದೇಶ ನೀಡುವ ನಿಟ್ಟಿನಲ್ಲಿ ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಅವರು 163 ಕೋಟಿ ರೂ. ಬೆಳೆಬಾಳುವ ಅಕ್ರಮ ಮಾದಕ ವಸ್ತುಗಳಿಗೆ ಬೆಂಕಿಯಿಟ್ಟರು. ‘’ಮಾದಕ ವಸ್ತುಗಳು ಯುವಕರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅನೇಕ ಕುಟುಂಬಗಳು ಇದರಿಂದ ತೊಂದರೆಗೊಳಗಾಗಿವೆ. ಅಲ್ಲದೆ ಇವು ಇತರೆ ಸಾಮಾಜಿಕ ತೊಂದರೆಗಳಿಗೂ ಕೂಡ ಕಾರಣವಾಗುತ್ತದೆ’’ ಎಂದು ಸಿಎಂ ಹೇಳಿದ್ದಾರೆ.
ಮಧ್ಯ ಅಸ್ಸಾಂನ ಡಿಫು, ಗೋಲಾಘಟ್, ಬರ್ಹಾಂಪುರ್ ಮತ್ತು ಹಜೋಯ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಅಕ್ರಮ ಮಾದಕವಸ್ತುಗಳಿಗೆ ಬೆಂಕಿಯಿಟ್ಟು ಸುಟ್ಟು ಹಾಕಿದ್ದಾರೆ. ಅಸ್ಸಾಂನ ಗೋಲಾಘಾಟ್ ನಲ್ಲಿ 1.02 ಕೆ.ಜಿ ಹೆರಾಯಿನ್, 1200 ಕೆ.ಜಿ ಗಾಂಜಾ ಹಾಗೂ 3 ಕೆ.ಜಿ ಅಫೀಮು ಸುಟ್ಟು ಹಾಕಲಾಗಿದೆ. ಢಿಫು ನಲ್ಲಿ 11.88 ಕೆ.ಜಿ ಮಾರ್ಫಿನ್, 2.89 ಕೆ.ಜಿ ಕ್ರಿಸ್ಟಲ್ ಮೆಥ್, 3.47 ಕೆ.ಜಿ ಹೆರಾಯಿನ್ ಹಾಗೂ 102.91 ಕೆ.ಜಿ ಗಾಂಜಾವನ್ನು ನಾಶಪಡಿಸಲಾಗಿದೆ.
ಇನ್ನು ಮಾದಕ ವಸ್ತುಗಳ ವಿರುದ್ಧದ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಟ್ವಿಟ್ಟರ್ ನಲ್ಲಿ ಮೆಮೆಗಳು ಸೃಷ್ಟಿಯಾಗಿದೆ.