ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ವಿಚಾರವಾಗಿ ಕಳೆದ ಒಂದು ವಾರದಿಂದ ಪರ/ವಿರೋಧಗಳ ತರ್ಕಗಳು ಮುಗಿಲು ಮುಟ್ಟಿವೆ. ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿರುವ ಕರ್ನಾಟಕ ಸರ್ಕಾರದ ನಿರ್ಣಯದ ವಿರುದ್ಧ ಮುಸ್ಲಿಂ ಸಮುದಾಯದ ಕೆಲ ಹುಡುಗಿಯರು ಪ್ರತಿರೋಧ ಒಡ್ಡಿರುವುದು ಭಾರೀ ಸುದ್ದಿಯಾಗಿದೆ.
ಇದೇ ವೇಳೆ, ಹಿಜಾಬ್‌ಗಳು, ಬುರ್ಕಾಗಳು, ಪೂರ್ತಿ ಮುಖ ಮುಚ್ಚುವ ಹೆಲ್ಮೆಟ್‌ಗಳನ್ನು ನಿಷೇಧ ಮಾಡಿರುವ ದೇಶಗಳ ಪಟ್ಟಿ ಇಂತಿದೆ.
ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ, ಟೊಯೊಟಾ ಕಂಪನಿ ಅಧ್ಯಕ್ಷರಿಂದಲೇ ಕುಟುಂಬದ ಕ್ಷಮೆಯಾಚನೆ
ಸ್ವಿಜ಼ರ್ಲೆಂಡ್
ಮಾರ್ಚ್ 2021ರಲ್ಲಿ ಸ್ವಿಜ಼ರ್ಲೆಂಡ್ ಸರ್ಕಾರ ‘ಬುರ್ಖಾ’ವನ್ನು ನಿಷೇಧಿಸಿತು. ಮುಖದ ಹೊದಿಕೆಗಳನ್ನು ನಿಷೇಧಿಸಬೇಕೆಂಬ ಬಲಪಂಥೀಯ ಪ್ರಸ್ತಾಪವು ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಜಯ ಗಳಿಸಿತ್ತು. 2009 ರಲ್ಲಿ ಹೊಸ ಮಿನಾರ್‌ಗಳ ನಿರ್ಮಾಣದ ಮೇಲೆ ನಿಷೇಧವನ್ನು ಆಯೋಜಿಸಿದ್ದ ಅದೇ ಗುಂಪಿನಿಂದ ಈ ಪ್ರಸ್ತಾಪವನ್ನು ಮುಂದಿಡಲಾಯಿತು.
ಸ್ವಿಸ್ ಸಂವಿಧಾನವನ್ನು ತಿದ್ದುಪಡಿ ಮಾಡುವ ಕ್ರಮವು 51.2-48.8% ಮತಗಳ ಅಂತರದಿಂದ ಅಂಗೀಕರಿಸಲ್ಪಟ್ಟಿದೆ ಎಂದು ತಾತ್ಕಾಲಿಕವಾಗಿ ಪ್ರಕಟಿಸಲಾದ ಅಧಿಕೃತ ಫಲಿತಾಂಶಗಳು ತೋರಿಸಿವೆ. ಮುಸುಕು ಮತ್ತು ಬುರ್ಖಾ ಧರಿಸುವ ಇಸ್ಲಾಮಿಕ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದ್ದು, ಹಿಂಸಾತ್ಮಕ ಪ್ರತಿಭಟನಾಕಾರರು ಮುಖವಾಡಗಳನ್ನು ಧರಿಸುವುದನ್ನು ಸಹ ತಡೆಯುವ ಗುರಿಯನ್ನು ಈ ಪ್ರಸ್ತಾವನೆ ಹೊಂದಿದೆ.
“ಸ್ವಿಜ಼ರ್ಲೆಂಡ್‌ನಲ್ಲಿ ಮುಖವನ್ನು ತೋರುವ ಸಂಪ್ರದಾಯವಿದೆ. ಇದು ಮೂಲ ಸ್ವಾತಂತ್ರ‍್ಯದ ಸಂಕೇತವಾಗಿದೆ,” ಎಂದು ಜನಾಭಿಪ್ರಾಯ ಸಂಗ್ರಹ ಸಮಿತಿಯ ಅಧ್ಯಕ್ಷ ಮತ್ತು ಸ್ವಿಸ್ ಪೀಪಲ್ಸ್ ಪಾರ್ಟಿಯ ಸಂಸತ್ ಸದಸ್ಯ ವಾಲ್ಟರ್ ವೊಬ್ಮನ್ ಮತದಾನದ ಮುನ್ನ ಹೇಳಿದ್ದರು. ಮುಖದ ಹೊದಿಕೆಯು “ರಾಜಕೀಯ ಇಸ್ಲಾಂನ ತೀವ್ರವಾದ ಸಂಕೇತವಾಗಿದೆ”, ಇದು ಯುರೋಪಿನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸುತ್ತಿದೆ ಮತ್ತು ಸ್ವಿಜ಼ರ್ಲೆಂಡ್‌ನಲ್ಲಿ ಇದಕ್ಕೆ ಯಾವುದೇ ಸ್ಥಾನವಿಲ್ಲ,” ವಾಬ್ಮನ್ ಹೇಳುತ್ತಾರೆ. ನಿರೀಕ್ಷೆಯಂತೆಯೇ ಮುಸ್ಲಿಂ ಸಂಘಟನೆಗಳು ಈ ಪ್ರಸ್ತಾವನೆ ಹಾಗೂ ಜನಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿವೆ.
ನೆದರ್ಲೆಂಡ್ಸ್
ನೆದರ್ಲೆಂಡ್ಸ್‌ನಲ್ಲಿ, ಸಾರ್ವಜನಿಕವಾಗಿ ಮುಖವನ್ನು ಮುಚ್ಚಿದರೆ ಕನಿಷ್ಠ €150 ಗಳಷ್ಟು ದಂಡ ತೆರಬೇಕಾಗಿ ಬರಬಹುದು. ಆಗಸ್ಟ್ 2019ರಲ್ಲಿ ಈ ಸಂಬಂಧ ಜಾರಿಗೆ ಬಂದ ನಿಷೇಧವು ಬುರ್ಖಾಗಳು, ಫುಲ್‌ಫೇಸ್ ಹೆಲ್ಮೆಟ್‌ಗಳು ಮತ್ತು ಬಾಲಾಕ್ಲಾವಾಗಳಿಗೆ ಅನ್ವಯಿಸುತ್ತದೆ. 14 ವರ್ಷಗಳ ಸುದೀರ್ಘ ಚರ್ಚೆಯ ನಂತರ ಇಲ್ಲಿ ಈ ನಿಷೇಧ ಜಾರಿಗೆ ಬಂದಿದೆ.
ಫ್ರಾನ್ಸ್
ʼಸಾರ್ವಜನಿಕ ಸ್ಥಳದಲ್ಲಿ ಮುಖವನ್ನು ಮರೆಮಾಚುವುದನ್ನು ನಿಷೇಧಿಸುವ ಕಾಯಿದೆ” ಮೂಲಕ ಮುಖದ ಹೊದಿಕೆಗಳನ್ನು ಫ್ರಾನ್ಸ್ ಸರ್ಕಾರ ನಿಷೇಧಿಸಿತು. ಈ ಕಾಯಿದೆಯನ್ನು ಫ್ರಾನ್ಸ್‌ನ ಸೆನೆಟ್ 14 ಸೆಪ್ಟೆಂಬರ್ 2010ರಂದು ಅಂಗೀಕರಿಸಿತು. ಈ ಕಾಯಿದೆಯು ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಮುಚ್ಚುವ ಮುಖವಾಡಗಳು, ಹೆಲ್ಮೆಟ್‌ಗಳು, ಬಾಲಕ್ಲಾವಾಗಳು, ನಿಕಾಬ್‌ಗಳು ಮತ್ತು ಇತರ ಮುಸುಕುಗಳನ್ನು ಒಳಗೊಂಡಂತೆ ಮುಖವನ್ನು ಮುಚ್ಚುವ ಶಿರಸ್ತ್ರಾಣಗಳನ್ನು ಧರಿಸುವುದನ್ನು ನಿಷೇಧಿಸಿತು.
ಮುಖವನ್ನು ಮುಚ್ಚುವಂಥ ಬುರ್ಖಾವನ್ನು ಸಹ ಕಾಯಿದೆ ಮೂಲಕ ನಿಷೇಧಿಸಲಾಗಿದೆ. ಹೆಚ್ಚುತ್ತಿರುವ ವಲಸೆ, ರಾಷ್ಟ್ರೀಯತೆ, ಜಾತ್ಯತೀತತೆ, ಭದ್ರತೆ ಮತ್ತು ಲೈಂಗಿಕತೆಯ ಬಗ್ಗೆ ಜನರು ಬಹಳ ಕಳವಳ ವ್ಯಕ್ತಪಡಿಸಿದ್ದರಿಂದ ಈ ನಿಷೇಧವು ಸಾರ್ವಜನಿಕರಲ್ಲಿ ಹೆಚ್ಚು ಚರ್ಚೆಯಾಯಿತು. ಭದ್ರತಾ ಸಂಬಂಧಿ ರಿಸ್ಕ್‌ಗಳ ಸಂದರ್ಭದಲ್ಲಿ ವ್ಯಕ್ತಿಗಳ ಸ್ಪಷ್ಟವಾದ ಗುರುತಿಸುವಿಕೆಗೆ ಮುಖದ ಹೊದಿಕೆಗಳು ಅಡ್ಡಿಯಾಗುತ್ತವೆ ನಿಷೇಧವಾದಿಗಳು ಹೇಳಿದ್ದು, ಇಸ್ಲಾಮಿಕ್ ಆಚರಣೆಗಳ ಹೆಸರಿನಲ್ಲಿ ಮಹಿಳೆಯರು ತಮ್ಮ ಮುಖವನ್ನು ಮುಚ್ಚಿಕೊಳ್ಳುವಂತೆ ಒತ್ತಾಯಿಸುವುದು ಲೈಂಗಿಕತೆ ಮತ್ತು ದಬ್ಬಾಳಿಕೆಯೇ ಆಗಿದೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ವಾದಿಸಿದ್ದ ನಿಷೇಧದ ವಿರೋಧಿಗಳು; ಈ ನಡೆಯಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸಿದಂತಾಗುತ್ತದೆ ಮತ್ತು ವೈಯಕ್ತಿಕ ನಂಬಿಕೆಗಳ ಕಾರಣದಿಂದಾಗಿ ಮುಸ್ಲಿಮರನ್ನು ಗುರಿಯಾಗಿಸಿದಂತಾಗುತ್ತದೆ ಎಂದಿದ್ದರು.
ಶ್ರೀಲಂಕಾ
“ರಾಷ್ಟ್ರೀಯ ಭದ್ರತೆಯ ಕಾರಣದಿಂದ” ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಮುಖದ ಮುಸುಕುಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ಈ ದೇಶದ ಸಂಪುಟವು ಏಪ್ರಿಲ್ 2021ರಲ್ಲಿ ಅನುಮೋದಿಸಿತು. ಕರೋನ ವೈರಸ್ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕವಾಗಿ ಮಾಸ್ಕ್‌ಗಳನ್ನು ಧರಿಸುವಂತೆ ಶ್ರೀಲಂಕಾ ಸರ್ಕಾರವು ಜನರನ್ನು ಒತ್ತಾಯಿಸುತ್ತಿರುವ ಸಮಯದಲ್ಲೇ ಈ ಕ್ರಮವು ಬಂದಿದೆ. ಆದರೆ, ಈ ಕ್ರಮವು ಕೇವಲ ಪ್ರಸ್ತಾವನೆಯ ರೂಪದಲ್ಲಿದ್ದು, ತರಾತುರಿಯಲ್ಲಿ ಜಾರಿಗೊಳಿಸಲು ಯಾವುದೇ ಕಾರಣವಿಲ್ಲ ಎಂದು ಸರ್ಕಾರವೂ ತಿಳಿಸಿದೆ.
ಬೆಲ್ಜಿಯಂ
2011 ರಿಂದ ಬೆಲ್ಜಿಯಂನಲ್ಲಿ ಸಾರ್ವಜನಿಕವಾಗಿ ಬುರ್ಖಾ ಸೇರಿದಂತೆ ಸಂಪೂರ್ಣ ಮುಖದ ಹೊದಿಕೆಗಳನ್ನು ನಿಷೇಧಿಸಲಾಗಿದೆ. ಈ ಕಾನೂನನ್ನು ಉಲ್ಲಂಘಿಸುವ ಜನರು ದಂಡ ಅಥವಾ ಏಳು ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಬೆಲ್ಜಿಯಂನಲ್ಲಿ ಒಂದು ದಶಲಕ್ಷದಷ್ಟು ಮುಸ್ಲಿಮರಿದ್ದು, ಅವರ ಪೈಕಿ ಕೇವಲ 300 ಜನರು ಬುರ್ಖಾ ಅಥವಾ ನಿಖಾಬ್ ಧರಿಸುತ್ತಾರೆ.
ಚೀನಾ
2017 ರಲ್ಲಿ, ಚೀನಾವು ಮುಸ್ಲಿಂ ಬಾಹುಳ್ಯದ ಶಿಂಜ಼ಿಯಾಂಗ್ ಪ್ರಾಂತ್ಯದಲ್ಲಿ ಬುರ್ಖಾಗಳು, ಮುಸುಕುಗಳು ಮತ್ತು “ಅಸಹಜ” ಗಡ್ಡವನ್ನು ನಿಷೇಧಿಸಿತು. ತನ್ನ ಈ ನಡೆಯನ್ನು “ಧಾರ್ಮಿಕ ಉಗ್ರವಾದದ ದಮನ” ಎಂದು ಹೇಳಿಕೊಂಡಿದೆ ಚೀನಾ. ರಾಜ್ಯ ನಿರ್ದೇಶಿತ ದೂರದರ್ಶನವನ್ನು ಮಾತ್ರವೇ ವೀಕ್ಷಿಸಲು ಜನರನ್ನು ಒತ್ತಾಯಿಸಿದ ಈ ಸುಗ್ರೀವಾಜ್ಞೆಯು ಮುಖವನ್ನು ಒಳಗೊಂಡಂತೆ ಪೂರ್ಣ ದೇಹವನ್ನು ಮುಚ್ಚುವ ಹೊರ ಉಡುಪುಗಳನ್ನು ಮುಖ್ಯವಾಗಿ ಕೇಂದ್ರೀಕರಿಸಿದೆ.
ಡೆನ್ಮಾರ್ಕ್
ಡೆನ್ಮಾರ್ಕ್‌ನಲ್ಲಿ, 2018ರ ಮೇ ತಿಂಗಳಲ್ಲಿ ಈ ಸಂಬಂಧ ಕಾನೂನನ್ನು ಮಾನ್ಯ ಮಾಡಿದ ನಂತರ ಅದೇ ವರ್ಷದ ಆಗಸ್ಟ್‌ನಲ್ಲಿ ಬುರ್ಖಾಗಳನ್ನು ಮೊದಲು ನಿಷೇಧಿಸಲಾಯಿತು. ಈ ಕಾನೂನಿನ ಉಲ್ಲಂಘನೆಗೆ ಅಲ್ಲಿ €135 ವರೆಗೆ ದಂಡ ವಿಧಿಸುತ್ತದೆ.
ಆಸ್ಟ್ರಿಯಾ
ಆಸ್ಟ್ರಿಯಾದಲ್ಲಿ, ಜನರು ತಮ್ಮ ಮುಖವನ್ನು ಕೂದಲಿನ ರೇಖೆಯಿಂದ ಗಲ್ಲದವರೆಗೆ ಕಾಣುವಂತೆ ಇಟ್ಟುಕೊಳ್ಳಬೇಕೆಂದು ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಮುಖದ ಮುಸುಕು ಧರಿಸುವುದರ ವಿರುದ್ಧದ ಕಾನೂನು ಎಂದು ಕರೆಯಲಾಗುತ್ತದೆ. ಈ ನಿಷೇಧವು 2017ರಿಂದ ಜಾರಿಯಲ್ಲಿದೆ. ಕಾನೂನನ್ನು ಉಲ್ಲಂಘಿಸುವವರು €150 ವರೆಗೆ ದಂಡ ಕಟ್ಟಬೇಕಾಗುತ್ತದೆ.
ಬಲ್ಗೇರಿಯಾ
ಬಲ್ಗೇರಿಯಾದಲ್ಲಿ, ಬುರ್ಖಾ ನಿಷೇಧವು 2016 ರಿಂದ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸುವವರಿಗೆ €750ವರೆಗೆ ದಂಡ ವಿಧಿಸಲಾಗುತ್ತದೆ. ಆದಾಗ್ಯೂ, ಕೆಲಸದ ಜಾಗದಲ್ಲಿ, ಪ್ರಾರ್ಥನಾ ಗೃಹಗಳಲ್ಲಿ ಹಾಗೂ ಕ್ರೀಡೆಗಳಲ್ಲಿ ಭಾಗಿಯಾದವರಿಗೆ ಈ ಕಾನೂನಿನಿಂದ ವಿನಾಯಿತಿಗಳನ್ನು ಕೊಡಲಾಗಿದೆ.
ಐರೋಪ್ಯ ಒಕ್ಕೂಟ
ಕಳೆದ ವರ್ಷ ಜುಲೈನಲ್ಲಿ, ಐರೋಪ್ಯ ಒಕ್ಕೂಟದ ಅತ್ಯುನ್ನತ ನ್ಯಾಯಾಲಯವು 2017ರ ತೀರ್ಪೊಂದನ್ನು ಎತ್ತಿಹಿಡಿದಿದ್ದು, ಯುರೋಪ್‌ನಲ್ಲಿ ಉದ್ಯೋಗದಾತರು ಮಹಿಳೆಯರು ಕೆಲಸ ಮಾಡಲು ಹೆಡ್‌ಸ್ಕಾರ್ಫ್‌ಗಳನ್ನು ಧರಿಸುವುದನ್ನು ನಿಷೇಧಿಸಲು ಅನುಮತಿಸಿದೆ. ಕೋರ್ಟ್‌ನ ಈ ತೀರ್ಪು ಭಾರೀ ಟೀಕೆಗೆ ಗ್ರಾಸವಾಗಿದ್ದು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಮುಸ್ಲಿಂ ರಾಷ್ಟ್ರಗಳು ಈ ನಿರ್ಧಾರ ಖಂಡಿಸಿದ್ದು, ಇದು ಇಸ್ಲಾಮೋಫೋಬಿಯಾವನ್ನು ಉತ್ತೇಜಿಸುತ್ತದೆ ಎಂದಿದ್ದವು.