ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ನಡೆದಿದ್ದ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದ್ದು, ಅರ್ಚನಾಳ ಮೂರನೇ ಪತಿಯ ಜತೆಗೆ ಇದೀಗ ಅರ್ಚನಾಳ ಮಗಳು ಯುವಿಕಾ ರೆಡ್ಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅರ್ಚನಾ ಹತ್ಯೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಕೋಟ್ಯಂತರ ರೂಪಾಯಿ ಆಸ್ತಿ, ಕಂತೆ ಕಂತೆ ಹಣ ಹೊಂದಿದ್ದ ಅರ್ಚನಾ ರೆಡ್ಡಿ ವೈಯಕ್ತಿಕ ಬದುಕಿನಲ್ಲಿ ಪದೇ ಪದೇ ಎಡವಿದ್ದೇ ಕೊಲೆಯಲ್ಲಿ ಅಂತ್ಯವಾಗಲು ಕಾರಣ ಎನ್ನಲಾಗುತ್ತಿದೆ. ಅದಾಗಲೇ ಎರಡು ವಿವಾಹವಾಗಿದ್ದ ಅರ್ಚನಾ ರೆಡ್ಡಿಗೆ ಇಬ್ಬರು ಮಕ್ಕಳಿದ್ದರು. ಇಬ್ಬರು ಪತಿಯಿಂದಲೂ ವಿಚ್ಛೇದನ ಪಡೆದಿದ್ದ ಅರ್ಚನಾ ಮೂರನೇ ಮದುವೆಯಾಗಿದ್ದಳು ಎನ್ನಲಾಗಿದೆ. ಮೂರನೇ ಪತಿ ಬಾಡಿ ಬಿಲ್ಡರ್ ನವೀನ್ ಗೆ ಪತ್ನಿಗಿಂತ ಪತ್ನಿಯ ಆಸ್ತಿ, ಆಕೆಯ ಮಗಳ ಮೇಲೆಯೇ ಕಣ್ಣಿತ್ತು. ಇದರ ಪರಿಣಾಮವೇ ಅರ್ಚನಾ ರೆಡ್ಡಿಯ ಭೀಕರ ಹತ್ಯೆ ಎಂದು ಹೇಳಲಾಗುತ್ತಿದೆ.
ವಿಡಿಯೋ: ಶಾರುಖ್ ಖಾನ್ ಆಗಿ ಬದಲಾದ ಮೇಕಪ್ ಕಲಾವಿದೆ
ನವೀನ್ ಹಾಗೂ ಅರ್ಚನಾ ನಡುವೆ ಹಣ ಹಾಗೂ ಆಸ್ತಿ ವಿಚಾರವಾಗಿ ಜಗಳವಾಗಿದೆ. ಇದೇ ಕಾರಣಕ್ಕೆ ಅರ್ಚನಾ, ನವೀನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಡಿಸೆಂಬರ್ 27ರಂದು ಜಿಗಣಿ ಪುರಸಭೆ ಚುನಾವಣೆಯಲ್ಲಿ ಮತದಾನ ಮಾಡಿ ರಾತ್ರಿ 10:30ರ ಸುಮಾರಿನಲ್ಲಿ ಕಾರಿನಲ್ಲಿ ಮಗ ಅರವಿಂದ್ ಜತೆ ಹೊರಟಿದ್ದ ಅರ್ಚನಾಳನ್ನು ಆಕೆಯ ಮೂರನೇ ಪತಿ ನವೀನ್ ಹಾಗೂ ದುಷ್ಕರ್ಮಿಗಳ ಗುಂಪು ಕಾರನ್ನು ಅಡ್ಡಗಟ್ಟಿ ನಡುರಸ್ತೆಯಲ್ಲಿಯೇ ಅರ್ಚನಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆಕೆಯ ಮಗನ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಅರ್ಚನಾ ಪುತ್ರ ಅರವಿಂದ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನವೀನ್ ಹಾಗೂ ಅನೂಪ್ ಸೇರಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಬಯಲಾಗಿದ್ದು, ಇದೀಗ ಅರ್ಚನಾಳ ಮಗಳು ಯುವಿಕಾ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರ್ಚನಾ ಸಹವಾಸ ಮಾಡಿದ್ದ ನವೀನ್ ಆಕೆಯ ಮಗಳ ಮೇಲೆಯೇ ಕಣ್ಣಿಟ್ಟಿದ್ದ. ತಾಯಿ ಹತ್ಯೆಯ ಹಿಂದೆ ಮಗಳು ಯುವಿಕಾ ಪಾತ್ರವೂ ಇದೆ ಎನ್ನಲಾಗಿದೆ.