ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆಂದು ಹೋಗುವ ಜನರಿಗೆ ವಾಹನ ನೋಂದಣಿ ದೊಡ್ಡ ಸಮಸ್ಯೆ. ಇದಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೆರವಾಗಿದೆ. ಈ ತೊಂದರೆ ನಿವಾರಿಸಲು ಹೊಸ ನೋಂದಣಿ ಗುರುತು ಅಂದರೆ ಭಾರತ್ ಸರಣಿ (BH ಸರಣಿ) ಪ್ರಾರಂಭಿಸಿದೆ. ಇದರ ಮೊದಲ ಬುಕಿಂಗ್ ಮಿರ್ಜಾಪುರದಲ್ಲಿ ನಡೆದಿದೆ.
ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಬಿಎಚ್ ಮಾರ್ಕ್ ಹೊಂದಿರುವ ವಾಹನಕ್ಕೆ ಹೊಸ ನೋಂದಣಿ ಪಡೆಯುವ ಅಗತ್ಯವಿಲ್ಲ ಎಂದು ಸಾರಿಗೆ ಸಚಿವಾಲಯ ಹೇಳಿದೆ.
ಭಾರತ ಸರಣಿ ಎಂದರೇನು? : ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಇದನ್ನು ಪರಿಚಯಿಸಿದೆ. ವಾಹನ ಮಾಲೀಕರು, ಬೇರೆ ರಾಜ್ಯಕ್ಕೆ ವರ್ಗಾವಣೆಗೊಂಡಾಗ, ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನವನ್ನು ಮತ್ತೆ ನೋಂದಾಯಿಸಬೇಕಾಗಿಲ್ಲ.
ಬಿಎಚ್ ಸರಣಿ ನಂಬರ್ ಪ್ಲೇಟ್ ಕಪ್ಪು ಮತ್ತು ಬಿಳಿ ಬಣ್ಣದ್ದಾಗಿರುತ್ತದೆ. ವಾಹನ ಸಂಖ್ಯೆ BH ನೊಂದಿಗೆ ಪ್ರಾರಂಭವಾಗುತ್ತದೆ. ನಂತರ ನೋಂದಣಿ ವರ್ಷದ ಕೊನೆಯ ಎರಡು ಅಂಕೆಗಳನ್ನು ನಮೂದಿಸಲಾಗುತ್ತದೆ. BH ಸರಣಿಯನ್ನು ಪಡೆಯಲು, ವಾಹನ ಮಾಲೀಕರು 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುತ್ತದೆ.
ಯಾರಿಗೆ ಹೆಚ್ಚು ಲಾಭ? : ರಕ್ಷಣಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗಿಗಳು, ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ವಲಯದ ಕಂಪನಿಗಳು ಮತ್ತು ಸಂಸ್ಥೆಗಳ ಉದ್ಯೋಗಿಗಳಿಗೆ ಇದ್ರಿಂದ ಹೆಚ್ಚಿನ ಲಾಭವಾಗಲಿದೆ.
ತಮ್ಮ ವೈಯಕ್ತಿಕ ವಾಹನಗಳನ್ನು ಭಾರತ್ ಸರಣಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇದು ಎಲ್ಲರಿಗೂ ಕಡ್ಡಾಯವಲ್ಲ. ಭಾರತ್ ಸರಣಿಯ ನೋಂದಣಿ ಗುರುತು ‘YYBh ####XX’ ಆಗಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? : ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಂತ್ರ ಭಾರತ್ ಸರಣಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು, ಮೊದಲು ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿಗಳ ವಾಹನ ಪೋರ್ಟಲ್‌ಗೆ ಲಾಗಿನ್ ಮಾಡಬೇಕು. ಹೊಸ ವಾಹನವನ್ನು ಖರೀದಿಸುವಾಗ ಡೀಲರ್ ಮಟ್ಟದಲ್ಲಿಯೂ ಇದನ್ನು ಮಾಡಬಹುದು. ಡೀಲರ್ ವಾಹನ ಮಾಲೀಕರ ಪರವಾಗಿ ವ್ಯಾನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಫಾರ್ಮ್ 20ನ್ನು ಭರ್ತಿ ಮಾಡಬೇಕು. ಕಾರಿನ ವೆಚ್ಚದ ಮೇಲೆ ರಸ್ತೆ ತೆರಿಗೆ ಪಾವತಿಸಬೇಕಾಗುತ್ತದೆ.
10 ಲಕ್ಷಕ್ಕಿಂತ ಕಡಿಮೆ ವೆಚ್ಚದ ವಾಹನಕ್ಕೆ ಶೇಕಡಾ 8ರಷ್ಟು ತೆರಿಗೆ ಪಾವತಿಸಬೇಕು. 10 ರಿಂದ 20 ಲಕ್ಷಗಳ ನಡುವಿನ ಬೆಲೆಯ ವಾಹನಕ್ಕೆ ಶೇಕಡಾ 10ರಷ್ಟು, 20 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ವಾಹನದ ಮೇಲೆ ಶೇಕಡಾ 12 ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಭಾರತ್ ಸರಣಿ ಅಗತ್ಯವಿದೆ ಎನ್ನುವವರು ಇದ್ರಲ್ಲಿ ಹೆಸರು ನೋಂದಾಯಿಸಿಕೊಂಡು ಈ ಸರಣಿ ಸಂಖ್ಯೆ ಪಡೆಯಬಹುದು.