ಕಳೆದ ಕೆಲ ದಿನಗಳಿಂದ ಮುಗಿಲು ಮುಟ್ಟಿದ್ದ ಟೊಮೊಟೊ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವ ಮಧ್ಯೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಬಾಳೆಹಣ್ಣಿನ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದ್ದು, ಹಬ್ಬಗಳು ಬರುತ್ತಿರುವ ಸಂದರ್ಭದಲ್ಲೇ ಈ ಬಿಸಿ ತಟ್ಟಿದೆ.
ಬುಧವಾರದಿಂದ ಶ್ರಾವಣ ಸಂಭ್ರಮ ಆರಂಭವಾಗುತ್ತಿದ್ದು, ಇದರ ಜೊತೆಗೆ ಸಾಲು ಸಾಲು ಹಬ್ಬಗಳು ಬರಲಿವೆ. ಆಗಸ್ಟ್ ತಿಂಗಳಿನಲ್ಲಿಯೇ ಮೂರು ಹಬ್ಬಗಳಿದ್ದು ಸಡಗರದಿಂದ ಬರಮಾಡಿಕೊಳ್ಳಲು ಜನ ಸಜ್ಜಾಗಿದ್ದಾರೆ. ಆಗಸ್ಟ್ 21ಕ್ಕೆ ನಾಗರಪಂಚಮಿ, ಆಗಸ್ಟ್ 25ಕ್ಕೆ ವರಮಹಾಲಕ್ಷ್ಮಿ ಹಬ್ಬ ಹಾಗೂ ಆಗಸ್ಟ್ 30 ರಂದು ರಾಕಿ ಹಬ್ಬವಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯೂ ಜೋರಾಗಿದೆ.
ಇದೇ ವೇಳೆ ಬಾಳೆಹಣ್ಣಿನ ಬೆಲೆ ಏರಿಕೆಯಾಗತೊಡಗಿದ್ದು, ಸಾಮಾನ್ಯವಾಗಿ ಕೆಜಿಗೆ 60 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಏಲಕ್ಕಿ ಬಾಳೆ ಈಗ 100 ರೂಪಾಯಿ ಗಡಿ ಸಮೀಪಿಸಿದೆ. ಹಾಗೆಯೇ 40 ರಿಂದ 50 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ನೇಂದ್ರ ಬಾಳೆಹಣ್ಣಿನ ಬೆಲೆ 70 ರಿಂದ 80 ರೂಪಾಯಿಗಳಿಗೆ ತಲುಪಿದೆ. ತಡವಾದ ಮಳೆ ಕಾರಣಕ್ಕೆ ಪೂರೈಕೆ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಕಾರಣವೆನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ.