
2003ರ ಆವೃತ್ತಿಯ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ ಭಾರತದ ಏಕೈಕ ಆಟಗಾರ್ತಿ ಎಂಬ ಖ್ಯಾತಿ ಪಡೆದಿರುವ ಅಂಜುಬಾಬಿ ಜಾರ್ಜ್ಗೆ ಬುಧವಾರ ವರ್ಷದ ಮಹಿಳೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಭಾರತದ ಮಾಜಿ ಅಂತಾರಾಷ್ಟ್ರೀಯ ಉದ್ದ ಜಿಗಿತದ ತಾರೆ ಇನ್ನೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016ರಲ್ಲಿ ಅಂಜು ಬಾಬಿ ಜಾರ್ಜ್ ಯುವತಿಯರಿಗೆ ತರಬೇತಿ ನೀಡಲು ಅಕಾಡೆಮಿ ಆರಂಭಿಸಿದ್ದಾರೆ. ಈ ಅಕಾಡೆಮಿಯಲ್ಲಿ ತರಬೇತಿ ಪಡೆದವರು ವಿಶ್ವ ಅಂಡರ್ 20 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ವಿಶ್ವ ಅಥ್ಲೆಟಿಕ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಅಥ್ಲೆಟಿಕ್ ಫೆಡರೇಷನ್ನ ಹಿರಿಯ ಉಪಾಧ್ಯಕ್ಷೆಯಾಗಿ ಲಿಂಗ ಸಮಾನತೆಗಾಗಿ ಅಂಜುಬಾಬಿ ಜಾರ್ಜ್ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೇ ಶಾಲಾ ಮಕ್ಕಳ ಉಜ್ವಲ ಕ್ರೀಡಾ ಭವಿಷ್ಯಕ್ಕಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದೆ.
ವಿಶ್ವ ಅಥ್ಲೆಟಿಕ್ಸ್ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆದಿರೋದು ನಿಜಕ್ಕೂ ಗೌರವ ಹೆಚ್ಚಿಸಿದೆ. ಪ್ರತಿದಿನ ಕ್ರೀಡೆಗಾಗಿ ದುಡಿಯುವುದಕ್ಕಿಂತ ಉತ್ತಮವಾದ ಭಾವನೆ ಬೇರೊಂದಿಲ್ಲ. ಇದರಿಂದ ಯುವತಿಯರು ಕ್ರೀಡೆಯಲ್ಲಿ ಸಕ್ರಿಯ ಹಾಗೂ ಸಬಲರಾಗಿದ್ದಾರೆ. ನನ್ನ ಈ ಪ್ರಯತ್ನವನ್ನು ಗುರುತಿಸಿದ ನಿಮಗೆ ಧನ್ಯವಾದ ಎಂದು ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ.