alex Certify ಗ್ಯಾರಂಟಿ ಯೋಜನೆಗಳ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೇಮಕ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾರಂಟಿ ಯೋಜನೆಗಳ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೇಮಕ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮೀಕ್ಷೆಗೆ ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ನೇಮಿಸಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ನಿಯೋಜಿತವಾಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ರಾಜ್ಯ ಸರಕಾರ ಮಾಡಿಸುತ್ತಿರುವ ಗ್ಯಾರಂಟಿ ಸಮೀಕ್ಷೆ ಲಜ್ಜೆಗೇಡಿತನದ ಪರಮಾವಧಿ. ಈ ಮಹಿಳೆಯರಿಗೆ ‘ಗ್ಯಾರಂಟಿ ಸ್ವಯಂ ಸೇವಕರು’ ಅಂತ ಹೆಸರು. ಹಾಗಾದರೆ, ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿ ತಮಗೆ ಬೇಕುಬೇಕಾದ ಸಂಸ್ಥೆಗಳಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಸುರಿದ ಜನರ ತೆರಿಗೆ ಹಣ ಎಲ್ಲಿಗೆ ಹೋಯಿತು?

ಹೆಚ್.ಎಂ.ರೇವಣ್ಣ ಅವರಿಗೆ ಸಂಪುಟದರ್ಜೆ ಕೊಟ್ಟು ರಚಿಸಲಾಗಿರುವ ‘ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ ಏನು ಕಿಸಿಯುತ್ತಿದೆ? ಜಿಲ್ಲೆ, ತಾಲೂಕು, ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಸಮೀಕ್ಷೆ ಮಾಡುತ್ತಿಲ್ಲವೇ?

ಗ್ಯಾರಂಟಿ ಅನುಷ್ಠಾನ ನಿರ್ವಹಣೆಗೆ ವಾರ್ಷಿಕ ₹16 ಕೋಟಿ ವೆಚ್ಚಿಸುತ್ತೇವೆ ಎಂದಿದ್ದಾರೆ ಸಿಎಂ. ಹಾಗಾದರೆ, ಇದಕ್ಕೆ ಹೋಗುತ್ತಿರುವ ವೇತನ, ಭತ್ಯೆಗಳೆಲ್ಲ ವ್ಯರ್ಥವೇ?

ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪೋಲಿಯೋ ಲಸಿಕೆ ಹಾಕುವುದರ ಜತೆಗೆ ಈ ಸುಡುಬಿಸಿಲಿನಲ್ಲಿ ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಅದೂ ಒತ್ತಾಯಪೂರ್ವಕವಾಗಿ… ಹಾಗಾದರೆ, ಅವರೂ ಈ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಾರೆಯೆ?

ಒಬ್ಬ ಕಾರ್ಯಕರ್ತೆಗೆ 120ರಿಂದ 150 ಮನೆ ಹಂಚಿಕೆ ಮಾಡಿದ್ದು, 10–15 ದಿನದಲ್ಲಿ ಸಮೀಕ್ಷೆ ಮುಗಿಸಬೇಕಿದೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೂ ಉರಿಬಿಸಿಲಿನಲ್ಲಿ ಮಾಡುವ ಈ ಕೆಲಸಕ್ಕೆ ಅವರಿಗೆ ಸಿಗುವ ಗೌರವಧನ ಕೇವಲ ₹1,000! ಅದೇ ‘ಎಸಿ ರೂಂ ಸಮೀಕ್ಷೆ ಗಿರಾಕಿ’ಗಳಿಗೆ ಕೋಟಿ ಕೋಟಿ ಹಣ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...