
ನೀವು ಕೂಡ ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಭದ್ರತಾತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಒಂದು ಭಯಾನಕ ಮಾಲ್ವೇರ್ ನಿಮ್ಮ ಮೊಬೈಲ್ನಲ್ಲಿ ಸೇರಿ ಎಲ್ಲಾ ದತ್ತಾಂಶಗಳನ್ನು ಕದಿಯುತ್ತಿದೆ ಎಂಬ ಆಘಾತಕಾರಿ ವಿಚಾರ ತಿಳಿದಿದೆ.
ಭದ್ರತಾ ಸಿಬ್ಬಂದಿ ಈ ಮಾಲ್ವೇರ್ನ್ನು ವಲ್ಟರ್ ಎಂದು ಕರೆದಿದ್ದಾರೆ. ಈ ಮಾಲ್ವೇರ್ ನಿಮ್ಮ ಮೊಬೈಲ್ ಪರದೆ ಮೇಲೆ ಕಾಣುವ ಪ್ರತಿಯೊಂದು ಮಾಹಿತಿಯನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ. ಅಂದರೆ ಲಾಗಿನ್ ಹಾಗೂ ಪಾಸ್ವರ್ಡ್ನಿಂದ ಹಿಡಿದು ನಿಮ್ಮ ಇಂಟರ್ನೆಟ್ ಹಿಸ್ಟರಿ, ಬ್ಯಾಂಕಿಂಗ್ ಮಾಹಿತಿ ಇಷ್ಟೆ ಏಕೆ ನಿಮ್ಮ ಖಾಸಗಿ ಸಂದೇಶಗಳು ಹಾಗೂ ಸೋಶಿಯಲ್ ಮೀಡಿಯಾ ಚಟುವಟಿಕೆಗಳನ್ನು ಕದ್ದಾಲಿಸುವ ಸಾಮರ್ಥ್ಯ ಹೊಂದಿದೆ.
ವರದಿಯ ಪ್ರಕಾರ, ವಲ್ಟರ್ ಅನ್ನೋದು ಒಂದು ಬ್ಯಾಂಕಿಂಗ್ ಟ್ರೋಜನ್ ಅಂದರೆ ಬ್ಯಾಂಕ್ ಮಾಹಿತಿಯನ್ನು ಕದಿಯುವ ಮಾಲ್ವೇರ್ ಆಗಿದೆ. ಇದು ಬೇರೆಲ್ಲ ಬ್ಯಾಂಕಿಂಗ್ ಟ್ರೋಜನ್ಗಳಿಗಿಂತ ವಿಭಿನ್ನವಾಗಿದೆ. ಬೇರೆಲ್ಲ ಮಾಲ್ವೇರ್ಗಳೂ ವೆಬ್ಸೈಟ್ನ ಮೂಲಕ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುತ್ತಿದ್ದವು. ಆದರೆ ವಲ್ಟರ್ ನೇರವಾಗಿ ಬಳಕೆದಾರರ ಮೊಬೈಲ್ ಪರದೆಯನ್ನೇ ರೆಕಾರ್ಡ್ ಮಾಡುವ ಕೆಲಸ ಮಾಡುತ್ತದೆ. ಅಂದರೆ ನೀವು ಯಾವುದೋ ವೆಬ್ಸೈಟ್ಗಳಿಗೆ ಹೋಗಿ ಮಾಲ್ವೇರ್ ಬಲೆಗೆ ಬೀಳುವ ಪ್ರಮೇಯವೇ ಇಲ್ಲಿ ಉದ್ಭವಿಸೋದಿಲ್ಲ.
ಥ್ರೆಟ್ ಫ್ಯಾಬ್ರಿಕ್ನ ಸುರಕ್ಷಾ ತಜ್ಞರು ಬ್ಲಾಗ್ ಪೋಸ್ಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಲ್ವೇರ್ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬೆಳಕಿಗೆ ಬಂದಿದೆ. ಈ ಮಾಲ್ವೇರ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಒಂದು ಅಪ್ಲಿಕೇಶನ್ ಮೂಲಕ ಎಲ್ಲೆಡೆ ಹರಡಿದೆ. ಈ ಅಪ್ಲಿಕೇಶನ್ನ್ನು ಸಾವಿರಾರು ಮಂದಿ ಡೌನ್ಲೋಡ್ ಮಾಡಿದ್ದಾರೆ. ಪ್ರೊಟೆಕ್ಷನ್ ಗಾರ್ಡ್ ಎಂಬ ಹೆಸರಿನ ಅಪ್ಲಿಕೇಶನ್ ಈ ಮಾಲ್ವೇರ್ನ್ನು ಹರಡಿದೆ ಎಂಬ ಆರೋಪವಿದೆ. ಪ್ರಸ್ತುತ ಪ್ಲೇಸ್ಟೋರ್ನಿಂದ ಈ ಅಪ್ಲಿಕೇಶನ್ನ್ನು ಅಳಿಸಿಹಾಕಲಾಗಿದೆ.