ಪತ್ನಿ ಹಣ ಕೊಡಲು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ಆಕೆಯನ್ನ ಪತಿ ಬರ್ಬರವಾಗಿ ಕೊಲೆಗೈದ ದಾರುಣ ಘಟನೆ ಚಿತ್ತೂರ್ ಜಿಲ್ಲೆಯ ರಾಮಸಮುದ್ರಂ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯರನ್ನ ಭುವನೇಶ್ವರಿ ಎಂದು ಗುರುತಿಸಲಾಗಿದ್ದು ಈಕೆ ವೃತ್ತಿಯಲ್ಲಿ ಟೆಕ್ಕಿ ಆಗಿದ್ದರು ಎನ್ನಲಾಗಿದೆ.
ಈ ಭಯಾನಕ ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಕೊಲೆಗಾರ ಪತಿ ಸೂಟ್ಕೇಸ್ ತೆಗೆದುಕೊಂಡು ಅಪಾರ್ಟ್ಮೆಂಟ್ ಒಳಗೆ ಬರ್ತಿರೋದನ್ನ ಕಾಣಬಹುದಾಗಿದೆ. ಕೆಲ ಸಮಯದ ಬಳಿಕ ಈತ ಪತ್ನಿ ಹೆಣವನ್ನು ಇದರಲ್ಲಿ ತುಂಬಿಕೊಂಡು ಸೂಟ್ಕೇಸ್ ಸಮೇತ ಅಪಾರ್ಟ್ಮೆಂಟ್ನಿಂದ ಹೊರನಡೆದಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಹೈದರಾಬಾದ್ನ ಎಂಎನ್ಸಿ ಕಂಪನಿಯಲ್ಲಿ ಟೆಕ್ಕಿ ಆಗಿದ್ದ ಭುವನೇಶ್ವರಿ ಕಾಣೆಯಾಗಿದ್ದಾರೆ ಎಂಬ ದೂರು ದಾಖಲಾಗಿತ್ತು. ಜೂನ್ 23ರಂದು ಸೂಟ್ಕೇಸ್ನಲ್ಲಿ ಸುಟ್ಟು ಹೋಗಿದ್ದ ಶವ ಪತ್ತೆಯಾಗಿತ್ತು.
ಮಂಗಳವಾರ ಮಧ್ಯಾಹ್ನ ನಮಗೆ ಸುಟ್ಟು ಹೋದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ನಾವು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆವು. ಶವವು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಆದರೆ ಮೂಳೆಗಳು ಮಾತ್ರ ಸಿಕ್ಕಿದ್ದವು. ಈ ಸುಟ್ಟ ದೇಹವನ್ನೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಯ್ತು ಎಂದು ತಿರುಪತಿಯ ಅಲಿಪಿರಿ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ರು.
ತನಿಖೆ ವೇಳೆ ಭುವನೇಶ್ವರಿ ಪತಿ ಮರಮ್ರೆಡ್ಡಿ ಶ್ರೀಕಾಂತ್ ರೆಡ್ಡಿಯೇ ಈ ಕೊಲೆಯ ಆರೋಪಿ ಎಂದು ತಿಳಿದು ಬಂದಿದೆ. ಚಾಕುವಿನಿಂದ ಇರಿದು ಹೆಂಡತಿಯನ್ನ ಕೊಲೆ ಮಾಡಿದ್ದ ಮರಮ್ ಬಳಿಕ ಆಕೆಯ ಶವವನ್ನ ಸೂಟ್ಕೇಸ್ನಲ್ಲಿ ಇರಿಸಿ ಸುಟ್ಟುಹಾಕಿದ್ದ ಎನ್ನಲಾಗಿದೆ.
ಆರೋಪಿ ಮರಮ್ ಕೂಡ ವೃತ್ತಿಯಲ್ಲಿ ಟೆಕ್ಕಿ ಆಗಿದ್ದು ಕೊರೊನಾ ಕಾರಣದಿಂದಾಗಿ ಕಳೆದ ಕೆಲ ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ಇದೇ ವಿಚಾರವಾಗಿ ಪತಿ – ಪತ್ನಿ ನಡುವೆ ಆಗಾಗ ಕಲಹವೇರ್ಪಡುತ್ತಿತ್ತು ಎನ್ನಲಾಗಿದೆ.
ಭುವನೇಶ್ವರಿ ಹಾಗೂ ಎಂ ಶ್ರೀಕಾಂತ್ ರೆಡ್ಡಿ ಕಡಪ ಜಿಲ್ಲೆಯ ಬಾಡ್ವೇಲ್ ನಿವಾಸಿಯಾಗಿದ್ದರು. ಇವರಿಬ್ಬರಿಗೆ 18 ತಿಂಗಳ ಪುತ್ರಿ ಕೂಡ ಇದ್ದಾಳೆ.