ಜನವರಿ 16ರಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನವನ್ನ ಮುಂದುವರಿಸಿರುವ ಆಂಧ್ರ ಪ್ರದೇಶ ಸರ್ಕಾರ ಇಲ್ಲಿಯವರೆಗೆ ಆಂಧ್ರದ 1.04 ಕೋಟಿ ಮಂದಿಗೆ ಕೊರೊನಾ ಲಸಿಕೆಯನ್ನ ನೀಡಲಾಗಿದೆ . ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 74.92 ಲಕ್ಷ ಮಂದಿ ಲಸಿಕೆಯ ಮೊದಲ ಡೋಸ್ ಹಾಗೂ 25.24 ಲಕ್ಷ ಮಂದಿ ಕೊರೊನಾ ಎರಡನೆ ಡೋಸ್ ಲಸಿಕೆ ಪಡೆದಿದ್ದಾರೆ.
ಕೇಂದ್ರದಿಂದ 98 ಲಕ್ಷ ಡೋಸ್ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನ ಆಂಧ್ರ ಪ್ರದೇಶ ಪಡೆದಿತ್ತು. ಇದಾದ ಬಳಿಕ ಕೆಲ ಪ್ರಮಾಣದ ಲಸಿಕೆಗಳನ್ನ ರಾಜ್ಯದ ಜನತೆಗೆ ಹೇಗೋ ಹೊಂದಿಸಿ ನೀಡಿದೆ. ಗುಜರಾತ್ ಹಾಗೂ ಮಹಾರಾಷ್ಟ್ರದಂತಹ ರಾಜ್ಯಗಳು ಜನಸಂಖ್ಯೆಯ 25 ಪ್ರತಿಶತದಷ್ಟು ಲಸಿಕೆಯನ್ನ ಪಡೆದಿದ್ದರೆ ಆಂಧ್ರ ಪ್ರದೇಶ ಮಾತ್ರ ಕೇವಲ 18 ಪ್ರತಿಶತ ಡೋಸ್ಗಳನ್ನ ಪಡೆದಿತ್ತು.
ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ, 45 ವರ್ಷ ಮೇಲ್ಪಟ್ಟವರು ಹಾಗೂ 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲು ಆಂಧ್ರ ಪ್ರದೇಶದಲ್ಲಿ ಸಾಲುವಷ್ಟು ಲಸಿಕೆಗಳು ಬಾಕಿ ಉಳಿದಿಲ್ಲ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆಯ ವೇಗವನ್ನ ಹೆಚ್ಚಿಸಬೇಕು ಅನ್ನೋದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಆಂಧ್ರ ಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಈಗಾಗಲೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಕೊರೊನಾ ಲಸಿಕೆ, ಮೆಡಿಕಲ್ ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಸೌಲಭ್ಯಗಳ ಅಭಾವದ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಆಂಧ್ರ ಪ್ರದೇಶ ಕೋವಿಡ್ ಸಹಾಯ ಹಸ್ತದ ನೋಡಲ್ ಅಧಿಕಾರಿ ಡಾ. ಅರ್ಜಾ ಶ್ರೀಕಾಂತ್ ಲಸಿಕೆ ಪೂರೈಕೆ ವಿಚಾರವಾಗಿ ಮಾತನಾಡಿದ್ದು, ರಾಜ್ಯದಲ್ಲಿ ನಾವು 1 ಕೋಟಿಗೂ ಅಧಿಕ ಮಂದಿಗೆ ಕೊರೊನಾ ಲಸಿಕೆಯನ್ನ ಪೂರೈಸಿದ್ದೇವೆ. ರಾಜ್ಯದಲ್ಲಿ ಪ್ರತಿ 7 ಮಂದಿಯಲ್ಲಿ ಒಬ್ಬರು ಲಸಿಕೆಯನ್ನ ಪಡೆದಿದ್ದಾರೆ ಎಂದು ಹೇಳಿದ್ರು.