ರಾಜ್ಯ ಕರಾವಳಿಯಲ್ಲಿ ಸಾಕಷ್ಟು ಫೇಮಸ್ ಬೀಚ್ ಗಳಿವೆ. ಆದ್ರೆ ಇಂತಹ ಬೀಚ್ ವೊಂದರಲ್ಲಿ ಸ್ಪೆಷಲ್ ಆದ ಪ್ರವಾಸಿ ತಾಣವೊಂದಿದೆ. ಅದು ಇರೋದು ಬೇರೆಲ್ಲೂ ಅಲ್ಲ ಕೃಷ್ಣನೂರು ಉಡುಪಿಯಲ್ಲಿ. ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಆ ಸ್ಥಳವೇ ಸೇಂಟ್ ಮೇರಿಸ್ ದ್ವೀಪ ಮೇರೀಸ್ ಐಲ್ಯಾಂಡ್. ಕರ್ನಾಟಕ ರಾಜ್ಯದ ಕೇವಲ 4 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೇಂಟ್ ಮೇರೀಸ್ ದ್ವೀಪವು ಒಂದು ಹಾಗು ದೇಶದ 26 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.
ಉಡುಪಿಯ ಮಲ್ಪೆ ಬಂದರಿನಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಈ ದ್ವೀಪ ಎಂತಹ ಪ್ರಾಕೃತಿಕ ಅದ್ಭುತವಾಗಿದೆ ಎಂದರೆ, ಇಲ್ಲಿರುವ 5-8 ಭುಜಗಳಿರುವ ಶಿಲೆಯ ಸಾವಿರಾರು ಕಂಬಾಕೃತಿಗಳು ಮಡಗಾಸ್ಕರ್ ದ್ವೀಪ ಬಿಟ್ಟರೆ ವಿಶ್ವದ ಬೇರೆಲ್ಲಿಯೂ ಕಾಣ ಸಿಗುವುದಿಲ್ಲ. ಆದ್ದರಿಂದಲೇ 2001ರಲ್ಲಿ ಭಾರತೀಯ ಭೂವಿಜ್ಞಾನ ಸಮೀಕ್ಷೆ ಇಲಾಖೆಯು ಈ ಸೇಂಟ್ ಮೇರಿಸ್ ದ್ವೀಪವನ್ನು ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಿದೆ. ಈ ಸೇಂಟ್ ಮೇರಿಸ್ ಐಲ್ಯಾಂಡ್ ಸುಮಾರು 1640 ಅಡಿ ಉದ್ದ ಮತ್ತು 328 ಅಡಿ ಅಗಲ ಇದ್ದು, ಒಟ್ಟು ಸುಮಾರು 5 ಚದರ ಕಿ.ಮಿ.ನಷ್ಟು ವಿಸ್ತೀರ್ಣವಿದೆ. ಇಲ್ಲಿನ ಕಲ್ಲಿನ ಸ್ತಂಭಾಕೃತಿಗಳ ಜೊತೆಗೆ, ದ್ವೀಪದ ಸುತ್ತಲು ಬೀಚ್ ಇದೆ. ನೂರಾರು ತೆಂಗಿನಮರಗಳಿವೆ. ಜೊತೆಗೆ ಔಷಧೀಯ ಗುಣವಿರುವ ‘ಈಶ್ವರ ಬಳ್ಳಿ’ ಇಲ್ಲಿ ಬೆಳೆಯುತ್ತದೆ. ಪ್ರಾಕೃತಿಕವಾಗಿ ಸಮುದ್ರ ಕೊರೆತವನ್ನು ತಡೆಯುವ ‘ರಾವಣನ ಮೀಸೆ’ ಅಥವಾ ‘ಚುಳ್ಳಿ’ ಎಂದು ಕರೆಯುವ ಬಳ್ಳಿಗಳು ಕೂಡ ಇಲ್ಲಿ ಕಾಣಸಿಗುತ್ತದೆ.
ಈ ದ್ವೀಪವನ್ನು ಪೂರ್ವದಿಕ್ಕಿನಿಂದ ಪ್ರವೇಶಿಸಬೇಕು. ಇಲ್ಲಿ ಬಿಳಿ ಬಣ್ಣದ ಸ್ವಚ್ಛವಾದ ಚಿಕ್ಕ ಬೀಚಿದೆ. ಇದನ್ನು ದಾಟಿ ದ್ವೀಪವನ್ನು ಹೊಕ್ಕರೆ ತೆಂಗಿನ ಮರಗಳು ಕೈಬೀಸಿ ಸ್ವಾಗತಿಸುತ್ತವೆ. ದ್ವೀಪದ ಪಶ್ಚಿಮ ಭಾಗದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣ ಬೀಚಿದೆ. ಈ ಬೀಚಲ್ಲಿ ಮರಳಿಲ್ಲ, ಬದಲಿಗೆ ಕೋಟಿಕೋಟಿಗಟ್ಟಲೆ ಚಿಕ್ಕ-ದೊಡ್ಡ ಬಣ್ಣಬಣ್ಣದ ಶಂಖ, ಸಿಂಪಿ, ಕಪ್ಪೆಚಿಪ್ಪುಗಳ ರಾಶಿಯೇ ಇದೆ. ಸ್ವಲ್ಪ ತಾಳ್ಮೆಯಿಂದ ಹುಡುಕಿದರೆ, ಅದರಲ್ಲಿ ಕವಡೆಗಳು ಸಿಗುತ್ತದೆ. ಅದೃಷ್ಟವಿದ್ದರೆ ಮುಷ್ಟಿಗಾತ್ರದಷ್ಟುದೊಡ್ಡ ಕವಡೆಗಳೂ ಸಿಗುತ್ತವೆ.
ಮಲ್ಪೆ ಬೀಚು ಅಭಿವೃದ್ಧಿ ಸಮಿತಿಯಿಂದ ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುವುದಕ್ಕೆ ಬೋಟುಗಳ ವ್ಯವಸ್ಥೆ ಇದೆ. ದ್ವೀಪದಲ್ಲಿ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಮಾಡಲಾಗಿದೆ. ತಾತ್ಕಾಲಿಕ ಹೊಟೇಲ್, ಶೌಚಾಲಯ, ಬಟ್ಟೆಬದಲಾಯಿಸುವ ಕೊಠಡಿ, ವಿಶ್ರಾಂತಿಗೆ ಆಸನಗಳು, ಸಾಹಸಪ್ರಿಯರಿಗೆ ದ್ವೀಪದೊಳಗೆ ತಿರುಗಾಡುವುದಕ್ಕೆ ಸೈಕಲುಗಳೂ ಇವೆ. ದ್ವೀಪದಲ್ಲಿ ಜನರ ಮೇಲೆ ನಿಗಾ ಇಡುವುದಕ್ಕೆ ಗಾರ್ಡ್‌ಗಳಿದ್ದಾರೆ. ಸಿಸಿ ಕ್ಯಾಮರಾದ ಕಣ್ಗಾವಲು ಇದೆ. ಒಟ್ಟಿನಲ್ಲಿ ಈ ಐಲ್ಯಾಂಡ್ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದವರ ಅಚ್ಚುಮೆಚ್ಚಿನ ಐಲ್ಯಾಂಡ್ ಸಹ ಹೌದು.