ಮಾರ್ಚ್ ಅಂತ್ಯದವರೆಗೂ ತನ್ನ ಸಹ ಸಂಸ್ಥಾಪಕ ಮತ್ತು ಎಂಡಿ ಅಶ್ನೀರ್ ಗ್ರೋವರ್ ಸ್ವಯಂ ಪ್ರೇರಣೆಯಿಂದ ರಜೆಯಲ್ಲಿದ್ದಾರೆ ಎಂದು ಫಿನ್ಟೆಕ್ ಸಂಸ್ಥೆ ಭಾರತ್‌ಪೇ ತಿಳಿಸಿದೆ.
ಗ್ರೋವರ್ ಮತ್ತು ಅವರ ಪತ್ನಿ ಹಾಗೂ ಕೋಟಕ್ ಮಹಿಂದ್ರಾ ಬ್ಯಾಂಕ್ ನಡುವಿನ ತಿಕ್ಕಾಟದ ನಡುವೆ ಈ ಬೆಳವಣಿಗೆ ಆಗಿದೆ.
ಗ್ರೋವರ್‌ರ ರಜೆಯ ಬಗ್ಗೆ ಭಾರತ್‌ಪೇ ಏನನ್ನೂ ಅಧಿಕೃತವಾಗಿ ತಿಳಿಸಿಲ್ಲ. ಆದರೆ, ತಾವು ಮಾರ್ಚ್ ಅಂತ್ಯದವರೆಗೂ ಸ್ವಯಂ ಪ್ರೇರಣೆಯಿಂದ ರಜೆಯಲ್ಲಿರುವುದಾಗಿ ಗ್ರೋವರ್ ತಿಳಿಸಿದ್ದಾರೆ ಎಂದು ಕಂಪನಿ ಹೇಳಿದೆ.
“ಭಾರತ್‌ಪೇಯನ್ನು ತಳದಿಂದ ಕಟ್ಟಿದ ಅಶ್ನೀರ್‌ರ ನಿರ್ಧಾರವು ಕಂಪನಿಯ ಭವಿಷ್ಯದ ಯಶಸ್ಸಿನ ದೃಷ್ಟಿಯಿಂದ ಸೂಕ್ತವಾಗಿರುತ್ತದೆ. ಅಶ್ನೀರ್‌ರ ನಿರ್ಧಾರವನ್ನು ಮಂಡಳಿ ಒಪ್ಪುತ್ತದೆ ಮತ್ತು ಕಂಪನಿ, ನಮ್ಮ ಉದ್ಯೋಗಿಗಳು ಮತ್ತು ಹೂಡಿಕೆದಾರರು ಹಾಗೂ ನಾವು ಪ್ರತಿನಿತ್ಯ ಬೆಂಬಲಿಸುವ ಲಕ್ಷಾಂತರ ವರ್ತಕರ ಹಿತದೃಷ್ಟಿಯಿಂದ ಇದು ಒಳ್ಳೆಯ ನಿರ್ಧಾರ ಎಂದು ನಾವು ಒಪ್ಪುತ್ತೇವೆ,” ಎಂದು ಭಾರತ್‌ಪೇ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದೇ ವೇಳೆ ಕಂಪನಿಯನ್ನು ಸಿಇಓ ಸುಹೇಲ್ ಸಮೀತ್ ಮುನ್ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ತನ್ನ ಮ್ಯಾನೇಜರ್ ಒಬ್ಬರೊಂದಿಗೆ ಗ್ರೋವರ್ ದಂಪತಿ ಅಸಭ್ಯವಾಗಿ ಮಾತನಾಡಿದ ಕಾರಣ ಅವರ ವಿರುದ್ಧ ನ್ಯಾಯಾಂಗ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾಗಿ ಕೋಟಕ್ ಮಹಿಂದ್ರಾ ಬ್ಯಾಂಕ್ ಜನವರಿ 9ರಂದು ತಿಳಿಸಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ನೈಕಾದ ಆರಂಭಿಕ ಸಾರ್ವಜನಿಕ ಆಫರ್ (ಐಪಿಓ) ಶೇರುಗಳು ಮತ್ತು ಹಣಕಾಸನ್ನು ಭದ್ರಪಡಿಸಿಕೊಳ್ಳಲು ಕೋಟಕ್ ಮಹಿಂದ್ರಾ ಬ್ಯಾಂಕ್ ವಿಫಲವಾಗಿದೆಯೆಂದು ಗ್ರೋವರ್ ದಂಪತಿ ಆಪಾದಿಸಿದ್ದಾರೆ.
ಬ್ಯಾಂಕಿನ ಸಂಬಂಧಗಳ ನಿರ್ವಾಹಕರೊಬ್ಬರೊಂದಿಗೆ ಗ್ರೋವರ್ ದಂಪತಿ ಮಾತನಾಡುತ್ತಿರುವ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಕ್ಲಿಪ್‌ನಲ್ಲಿ ಕೇಳಿ ಬರುವ ಒಂದು ಪುರುಷ ದನಿಯು ಬಯ್ಯುತ್ತಾ ಇದ್ದರೆ ಮತ್ತೊಂದು ಪುರುಷ ದನಿ ಸಮಾಧಾನಪಡಿಸಲು ನೋಡುತ್ತಿದೆ.
ಈ ಟೇಪ್ ನಕಲಿಯೆಂದ ಅಶ್ನೀರ್ ಗ್ರೋವರ್, ದುಡ್ಡು ಕೀಳಲು ವಂಚನೆಯ ಜಾಲ ಹೆಣೆದಿರುವ ಯಾರೋ ಹೀಗೆ ಮಾಡಿದ್ದಾರೆ ಎಂದಿದ್ದಾರೆ.
ದೇಶದ 150 ನಗರಗಳ 75 ಲಕ್ಷ ವರ್ತಕರಿಗೆ ಸೇವೆ ಸಲ್ಲಿಸುವ ಭಾರತ್‌ಪೇ ಅದಾಗಲೇ 3,000 ಕೋಟಿ ರೂ.ಗೂ ಅಧಿಕ ಮೊತ್ತದ ಸಾಲ ವಿತರಿಸಿದೆ. ಇದುವರೆಗೂ ಈಕ್ವಿಟಿ ಮತ್ತು ಡೆಟ್ ಮುಖಾಂತರ $650 ದಶಲಕ್ಷ ಸಂಗ್ರಹಿಸಿದೆ.