alex Certify ‘ದೇವರು ಹೇಗಿದ್ದಾನೆಂದು ತೋರಿಸಿಕೊಟ್ಟವರು ಅಮರಶಿಲ್ಪಿ ಜಕಣಾಚಾರಿ’ : ಶಾಸಕ ಚನ್ನಬಸಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೇವರು ಹೇಗಿದ್ದಾನೆಂದು ತೋರಿಸಿಕೊಟ್ಟವರು ಅಮರಶಿಲ್ಪಿ ಜಕಣಾಚಾರಿ’ : ಶಾಸಕ ಚನ್ನಬಸಪ್ಪ

ಶಿವಮೊಗ್ಗ : ಇಡೀ ಜಗತ್ತಿಗೆ ದೇವರು ಹೇಗಿದ್ದಾನೆ ಎಂದು ತಮ್ಮ ಶಿಲ್ಪಕಲೆಯ ಮೂಲಕ ತೋರಿಸಿಕೊಟ್ಟವರು ಅಮರ ಶಿಲ್ಪಿ ಜಕಣಾಚಾರಿಯವರು ಎಂದು ಶಾಸಕ  ಎಸ್.ಎನ್.ಚನ್ನಬಸಪ್ಪ ಹೇಳಿದರು.

ಅವರು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಸಾಂಸ್ಕತಿಕ ನೆಲೆಗಟ್ಟಿನ ಮತ್ತು ಉನ್ನತ ಪರಂಪರೆಯ ರಾಷ್ಟ್ರವಾಗಿದ್ದು, ತಮ್ಮದೇ ಆದ ರೀತಿಯಲ್ಲಿ ಶಿಲ್ಪಕಲೆಯ ಮೂಲಕ ದೇಶ ಕಟ್ಟುವ ಕಾರ್ಯವನ್ನು ಜಕಣಾಚಾರಿಯಂತಹ ಶಿಲ್ಪಿಗಳು ಮಾಡಿದ್ದಾರೆ. ಮೇರು ವ್ಯಕ್ತಿತ್ವದ ಇವರು ಸೋಮನಾಥ ದೇವಾಲಯ, ಬೇಲೂರು, ಹಳೇಬೀಡಿನಂತಹ ದೇವಾಲಯ ನಿರ್ಮಿಸಿದ ಪುಣ್ಯಾತ್ಮರು.

ಇಡೀ ಜಗತ್ತು ನಮ್ಮೆಡೆ ನೋಡುವಂತೆ ಮಾಡಿರುವುದು ಇಂತಹ ಶಿಲ್ಪಿಗಳು. ದೇಶದ ಶಿಲ್ಪಕಲೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಶಿಲ್ಪಕಲೆ ದೇಶದ ಅಸ್ಮಿತೆ. ದೇವಾಲಯಗಳ ಬಗ್ಗೆ ಶ್ರದ್ದೆ, ನಂಬಿಕೆ ಮತ್ತು ಆಸಕ್ತಿ ಹೊಂದಿರುವವರು ನಾವು. ನಮ್ಮದು ಸನಾತನ, ದೇವನಿರ್ಮಿತ ದೇಶ. ಸೋಮನಾಥ ಪುರ ಸೇರಿದಂತೆ ಅಯೋಧ್ಯ, ಕಾಶಿ ವಿಶ್ವನಾಥ ಹೀಗೆ ಅನೇಕ ದೇವಾಲಯಗಳನ್ನು ಭಗ್ನಗೊಳಿಸಲಾಗಿದ್ದು, ಹೋರಾಟದ ಮೂಲಕ ನಮ್ಮ ದೇವಾಲಯಗಳು ಮತ್ತು ಪರಂಪರೆಯನ್ನು ಉಳಿಸಿಕೊಂಡಿದ್ದೇವೆ ಎಂದರು.

ಶೃಂಗೇರಿಯ ಕನ್ನಡ ಪ್ರಾಧ್ಯಾಪಕರಾದ ಡಾ.ಕೆ.ಎಸ್.ವೆಂಕಪ್ಪ ಆಚಾರ್ಯ ಇವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ದೇಶದಲ್ಲಿರುವ ಕಲೆ, ಕೌಶಲ್ಯ, ಸಾಧನೆಗಳಿಂದಾಗಿ ವಿಶ್ವ ಇಂದು ನಮ್ಮನ್ನು ಗುರುತಿಸುತ್ತಿದೆ. ಆದರೆ ಹಿಂದಿನ ಅನೇಕ ಶಿಲ್ಪಕಲೆಗಳ ನಿರ್ಮಾತೃಗಳನ್ನು ಎಲ್ಲೂ ತೋರಿಸಿಲ್ಲ. ಕಲೆಯ ನಿರ್ಮಾತೃಗಳನ್ನು ಜಗತ್ತಿಗೆ ತೋರಿಸಬೇಕಿದೆ. ಶಿಲ್ಪಿ ಅಥವಾ ಕಲಾವಿದನನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸಬೇಕಿದ್ದು ಈ ಸಂಸ್ಮರಣಾ ದಿನಚರಣೆಯು ಇಂತಹ ಶಿಲ್ಪಿಗಳನ್ನು ಸಂಸ್ಮರಿಸಲು ಮತ್ತು ಸಮುದಾಯದವರೆಲ್ಲ ಒಟ್ಟುಗೂಡಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು.

12 ನೇ ಶತಮಾನದಲ್ಲಿ ತುಮಕೂರು ಬಳಿಯ ಕ್ರೀಡಾಪುರದಲ್ಲಿ ಜಕಣಾಚಾರಿಯವರು ಜನಿಸಿದರು. ವಿಶ್ವ ಪ್ರಸಿದ್ದ ಬೇಲೂರು, ಹಳೇಬೀಡು, ಸೋಮನಾಥ ದೇವಾಲಯ ನಿರ್ಮಾಣ ಮಾಡಿ ತಮ್ಮ ಕಲೆ, ಕೌಶಲ್ಯ, ಜಾಣ್ಮೆ, ಶ್ರದ್ದೆ ಮತ್ತು ಹಠವನ್ನು ಈ ಶಿಲ್ಪಕಲೆ ಮೂಲಕ ವಿಶ್ವಕ್ಕೇ ಸಾರಿದ್ದಾರೆ. ನಾವೆಲ್ಲ ಈ ಕುರಿತು ಚಿಂತಿಸಬೇಕು ಎಂದರು.

ಅತ್ಯಂತ ಚಾಣಾಕ್ಷ, ಕುಶಲಿ ಜಕಣಾಚಾರಿಯವರ ನೇತೃತ್ವದಲ್ಲಿ ಸಮುದಾಯದ ಅನೇಕ ಶಿಲ್ಪಿಗಳು ಕಾರ್ಯ ನಿರ್ವಹಿಸಿದ್ದು ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅನನ್ಯವಾಗಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಭಾಗವಾಗಿ ರಥವನ್ನು ಹಾಗೂ ಒಂದು ಮೂರ್ತಿಯನ್ನು ನಮ್ಮ ಸಮುದಾಯದವರು ನಿರ್ಮಿಸಿರುವುದು ಹೆಮ್ಮೆಯ ವಿಷಯ. ನಮ್ಮ ಕೌಶಲ್ಯ, ಪ್ರತಿಭೆಗೆ ಜನಮನ್ನಣೆ ಸಿಗುತ್ತಿದ್ದು, ಈ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡಯ್ಯಬೇಕು.

ಯುವಜನತೆ ಪಾಲ್ಗೊಳ್ಳುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅವರಿಗೂ ಇತಿಹಾಸದ ಜ್ಞಾನ ಹೆಚ್ಚಬೇಕು. ಸಮಾಜ ಸಂಘಟನೆ ಆಗಬೇಕು. ಕಲೆಗೆ ಪ್ರೋತ್ಸಾಹ ದೊರಕಬೇಕು. ಹಾಗೂ ಗೌರವ, ಮನ್ನಣೆ ಸಿಗುಂತಹ ಕಾರ್ಯಗಳನ್ನು ಸಮಾಜಬಾಂಧವರು ಕೈಗೊಳ್ಳಬೇಕೆಂದು ಆಶಿಸಿದರು. ಇದೇ ವೇಳೆ ಸಮಾಜದ ಇಬ್ಬರು ಸಾಧಕರಾದ ನವೀನ್ ಮತ್ತು ಭರತ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...