ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಬಾಸ್ಕೆಟ್ ಬಾಲ್ ಆಡುತ್ತಿರುವ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಇದೀಗ ಮದುವೆ ಸಮಾರಂಭವೊಂದರಲ್ಲಿ ನೃತ್ಯ ಮಾಡುತ್ತಿರುವ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದೆ. ಈ ವಿಡಿಯೋದಿಂದಾಗಿ ಕಾಂಗ್ರೆಸ್ಗೆ ಪ್ರಗ್ಯಾ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತೆ ಆಗಿದ್ದು ಮಾಲೆಂಗಾವ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಅನಾರೋಗ್ಯ ನೆಪ ಹೇಳುತ್ತಿದ್ದ ಸಂಸದೆಯನ್ನ ಟೀಕಿಸಿದೆ.
ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಮಧ್ಯ ಪ್ರದೇಶದ ಭೋಪಾಲ್ನಲ್ಲಿ ಬಡ ಮನೆಯ ಅವಳಿ ಹೆಣ್ಣು ಮಕ್ಕಳ ಮದುವೆಯನ್ನ ಮಾಡಿಸಿದ್ದಾರೆ. ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಗ್ಯಾ ಹೆಣ್ಣುಮಕ್ಕಳ ಕುಟುಂಬಸ್ಥರ ಜೊತೆ ಹೆಜ್ಜೆ ಹಾಕಿದ್ದಾರೆ.
ಪ್ರಗ್ಯಾ ಠಾಕೂರ್ ನೀಡಿದ ಸಹಾಯದ ಕುರಿತು ಮಾತನಾಡಿದ ಇಬ್ಬರು ಹೆಣ್ಣು ಮಕ್ಕಳು ನಮಗೆ ತುಂಬಾನೇ ಸಂತಸವಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇದೇ ವಿಚಾರವಾಗಿ ವಧುಗಳ ತಂದೆ ಕೂಡ ಮಾತನಾಡಿದ್ದು, ನಾನೊಬ್ಬ ದಿನಗೂಲಿ ಕಾರ್ಮಿಕನಾಗಿದ್ದೇನೆ. ಹೆಣ್ಣು ಮಕ್ಕಳ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದ ಸಂದರ್ಭದಲ್ಲಿ ಭೋಪಾಲ್ ಸಂಸದೆ ಪ್ರಗ್ಯಾ ಠಾಕೂರ್ ನಮಗೆ ಸಹಾಯ ಮಾಡಿದ್ದಾರೆ. ಇದರಿಂದ ನನಗೆ ಮತ್ತೊಂದು ಜೀವನ ಸಿಕ್ಕಂತಾಗಿದೆ. ಪ್ರಗ್ಯಾ ಠಾಕೂರ್ ನಮ್ಮ ಪಾಲಿನ ದೇವರಿದ್ದಂತೆ ಎಂದು ಹೇಳಿದ್ದಾರೆ.
ಆದರೆ ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕಾಂಗ್ರೆಸ್ ನಾಯಕ ನರೇಂದ್ರ ಸಲುಜಾ ಪ್ರಗ್ಯಾ ಠಾಕೂರ್ರನ್ನ ಟೀಕಿಸಿದ್ದಾರೆ.
ನಾವು ಯಾವಾಗ ಭೋಪಾಲ್ ಸಂಸದೆ, ಸಹೋದರಿ ಪ್ರಗ್ಯಾ ಠಾಕೂರ್ನ್ನ ನೋಡಿದ್ರೂ ಸಹ ಅವರು ಬಾಸ್ಕೆಟ್ ಬಾಲ್ ಆಡುತ್ತಾ ಇಲ್ಲವೇ ಯಾವುದೇ ಸಹಾಯವೇ ಇಲ್ಲದೇ ನಡೆಯುತ್ತಾ ಅಥವಾ ಈ ರೀತಿ ಸಂತಸವಾಗಿ ನೃತ್ಯ ಮಾಡುತ್ತಾ ಇರ್ತಾರೆ. ಇದರಿಂದ ನಮಗೆ ಖುಷಿಯಾಗುತ್ತದೆಯೇ..? ಎಂದು ಟ್ವೀಟಾಯಿಸಿದ್ದಾರೆ.
ಜುಲೈ 1ನೇ ತಾರೀಖಿನಂದು ಪ್ರಗ್ಯಾ ಠಾಕೂರ್ ಬಾಸ್ಕೆಟ್ ಬಾಲ್ ಆಡುತ್ತಿರುವ ವಿಡಿಯೋ ಶೇರ್ ಮಾಡಿದ್ದ ನರೇಂದ್ರ ಸಲುಜಾ, ಕೆಲ ಸಮಯದ ಹಿಂದಷ್ಟೇ ನಾವು ಪ್ರಗ್ಯಾ ಠಾಕೂರ್ ವ್ಹೀಲ್ ಚೇರ್ನ ಮೇಲೆ ಇದ್ದಿದ್ದನ್ನ ನೋಡಿದ್ದೆವು. ಆದರೆ ಈಗ ಅವರು ಭೋಪಾಲ್ ಸ್ಟೇಡಿಯಂನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರೋದನ್ನ ನೋಡೋಕೆ ನಿಜಕ್ಕೂ ಸಂತಸವಾಗ್ತಿದೆ ಎಂದು ವ್ಯಂಗ್ಯ ಮಾಡಿದ್ದರು.
2008ರ ಮಲೆಂಗಾವ್ ಬಾಂಬ್ ಸ್ಪೋಟದ ಆರೋಪಿಯಾಗಿರುವ ಪ್ರಗ್ಯಾ ಠಾಕೂರ್ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. 2017ರಂದು ಜಾಮೀನಿನ ಮೂಲಕ ಅವರು ಜೈಲಿನಿಂದ ಹೊರಬಂದಿದ್ದಾರೆ.
https://twitter.com/i/status/1412772711269498882