ಕೋವಿಡ್ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಗಳ ಚಿತ್ರ ಹಾಕಬೇಕೆಂಬ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮರಣ ಪ್ರಮಾಣ ಪತ್ರಗಳ ಮೇಲೂ ಪಿಎಂ ಚಿತ್ರ ಹಾಕಿಸಿಕೊಳ್ಳಿ ಎಂದು ಖಾರವಾಗಿ ನುಡಿದಿದ್ದಾರೆ.
“ಒಬ್ಬ ವ್ಯಕ್ತಿ ನಿಮ್ಮ ಬೆಂಬಲಿಗನಲ್ಲದೇ ಇರಬಹುದು. ಆದರೆ ಕೋವಿಡ್-19 ಲಸಿಕಾ ಪ್ರಮಾಣ ಪತ್ರಗಳ ಮೇಲೆ ನಿಮ್ಮ ಫೋಟೋ ಕಡ್ಡಾಯ ಮಾಡಿದ್ದೀರಿ. ನನಗೆ ನೀವು ಇಷ್ಟವಾಗದೇ ಇರಬಹುದು. ಆದರೂ ಸಹ ನಾನೇಕೆ ಇದನ್ನು ಹೊತ್ತೊಯ್ಯಬೇಕು? ಎಲ್ಲಿದೆ ಸ್ವಾತಂತ್ರ‍್ಯ? ಈಗ ಮರಣ ಪ್ರಮಾಣ ಪತ್ರಗಳ ಮೇಲೂ ನಿಮ್ಮ ಫೋಟೋ ಇಡಬೇಕೆ?” ಎಂದು ದೀದಿ ಕಿಡಿ ಕಾರಿದ್ದಾರೆ.
ಈ ಕಾರಣಕ್ಕೆ ಪೊಲೀಸ್ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ
ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಯ ಫೊಟೋಗಳನ್ನು ಮೊದಲು ತೆಗೆಯಬೇಕೆಂದು ಆಗ್ರಹಿಸುತ್ತಿರುವ ತೃಣಮೂಲ ಕಾಂಗ್ರೆಸ್‌ನ ಸಂಸದ ಡೆರೆಕ್ ಒ’ಬ್ರಯಾನ್ ಅವರು ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದಾರೆ.
ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿ ಚಿತ್ರಗಳನ್ನು ತೆಗೆದುಹಾಕಬೇಕೆಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಈ ನಡೆಯನ್ನು ಸಮರ್ಥಿಸಿರುವ ಬಿಜೆಪಿ, “ಲಸಿಕೆ ಪ್ರಮಾಣ ಪತ್ರಗಳಲ್ಲಿ ಪ್ರಧಾನಿ ಫೋಟೋ ಜೊತೆಗೆ ಅವರ ಸಂದೇಶವೂ ಇದ್ದು, ಕೋವಿಡ್-19 ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಖ್ಯವಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ನೆರವಾಗಿದೆ. ಈ ನಡೆಯು ಸಾರ್ವಜನಿಕ ಹಿತಾಸಕ್ತಿಯದ್ದಾಗಿದೆ,” ಎಂದು ಹೇಳಿದೆ.