ಭಾರತೀಯ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅದರಲ್ಲೂ ವಿಶೇಷವಾಗಿ ಐಪಿಎಸ್ ಅಧಿಕಾರಿಗಳು ಪ್ರಚಾರಗಳಿಂದ ದೂರವೇ ಇರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ಪ್ರಚಾರದ ಹಂಬಲವು ಸೇವೆಗೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ.
ಐಪಿಎಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಿಂದ ದೂರವೇ ಇರಿ. ಪ್ರಚಾರಕ್ಕಾಗಿ ಕೆಲಸ ಮಾಡಬೇಡಿ. ಬಡವ, ದಲಿತ ಹಾಗೂ ಬುಡಕಟ್ಟು ಜನಾಂಗದವರ ಬಗ್ಗೆ ವಿಶೇಷ ಕಾಳಜಿ ಇರಲಿ ಎಂದು ಅಮಿತ್ ಶಾ ಸಲಹೆ ನೀಡಿದ್ದಾರೆ.
ಪೊಲೀಸರ ವಿರುದ್ಧ ಯಾವುದೇ ಗಂಭೀರ ಕ್ರಮಗಳನ್ನ ಕೈಗೊಂಡಿಲ್ಲ ಎಂಬ ಆರೋಪವಿದೆ. ಪೊಲೀಸರು ಕೆಲಸದ ಕಡೆ ಮಾತ್ರ ಗಮನ ನೀಡುವಂತೆ ಆಗಬೇಕು. ಪೊಲೀಸರು ದೇಶದ ಕಾನೂನನ್ನ ಅರ್ಥ ಮಾಡಿಕೊಂಡು ಸರಿಯಾದ ಹೆಜ್ಜೆ ಇಡಬೇಕು ಎಂದು 72ನೇ ಐಪಿಎಸ್ ಬ್ಯಾಚ್ನ ಪ್ರೊಬೆಷನರಿ ಅವಧಿಯಲ್ಲಿರುವ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುವ ವೇಳೆ ಈ ಸಲಹೆಗಳನ್ನ ನೀಡಿದ್ದಾರೆ.