ನವದೆಹಲಿ: ವಿಶ್ವದಾದ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್ ಅನ್ನು 2 ಶತಕೋಟಿಗೂ ಹೆಚ್ಚು ಜನರು ಬಳಸುತ್ತಾರೆ. ವೆಬ್‌ಸೈಟ್ ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಸಂವಹನ ನಡೆಸಲು, ಹಣವನ್ನು ನೀಡಲು ಮತ್ತು ಸ್ವೀಕರಿಸಲು ಇದು ನೆರವಾಗುತ್ತಿದೆ.
ಇದರ ಹೊರತಾಗಿಯೂ ಈಗ ವಂಚನೆಯ ದೊಡ್ಡ ಜಾಲ ಬೆಳಕಿಗೆ ಬಂದಿದೆ. ಈಗೀಗ ಫೇಕ್ ಐಡಿ ಕ್ರಿಯೇಟ್ ಮಾಡಿ ಅವರ ಸ್ನೇಹಿತರಂತೆ ನಟಿಸಿ ಹಣ ಕೇಳುವುದು ಮಾಮೂಲು ಆಗಿದೆ. ಆದರೆ ಇದು ಅದಕ್ಕಿಂತಲೂ ಭಯಾನಕವಾಗಿರುವ ಕೇಸ್.
ಹಾಯ್ ಮಮ್ ಅಥವಾ ಫ್ಯಾಮಿಲಿ ಸೋಗು ಹಾಕುವ ಹಗರಣ ಎಂದು ಕರೆಯಲ್ಪಡುವ ಹೊಸ ವಂಚನೆ ನಡೆಯುತ್ತಿದೆ. 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಅನೇಕ ಗ್ರಾಹಕರಿಗೆ $7 ಮಿಲಿಯನ್ ಅಥವಾ 57 ಕೋಟಿಗೂ ಹೆಚ್ಚು ಮೋಸ ಮಾಡಲಾಗಿದೆ. ಸ್ನೇಹಿತರು ಅಥವಾ ಕುಟುಂಬದ ಸದಸ್ಯರಂತೆ ನಟಿಸಿ ಮೆಸೇಜ್ ಮಾಡಿ ಹಣ ಕೇಳುವ ಪರಿ ಇದು. ಇಲ್ಲಿ ಸಾಮಾನ್ಯ ರೀತಿಯ ಫೇಕ್ ಐಡಿ ಇರುವುದಿಲ್ಲ. ಬದಲಿಗೆ ತಮ್ಮದೇ ಫೋನ್ ಸಂಖ್ಯೆಯಿಂದ ಕರೆ ಮಾಡಲಾಗುತ್ತದೆ. ಆದರೆ ತಾವು ಯಾರಿಗೆ ಕರೆ ಮಾಡುತ್ತಿದ್ದಾರೋ ಅವರ ಕುಟುಂಬಸ್ಥರ ಅಥವಾ ಸ್ನೇಹಿತರ ದನಿಯಂತೆ ಕರೆ ಮಾಡಿ ತಮ್ಮ ಮೊಬೈಲ್ ಎಲ್ಲಿಯೋ ಕಳೆದು ಹೋಗಿದೆ. ಜತೆಗೆ ಪರ್ಸ್ ಕೂಡ ಕಳೆದು ಹೋಗಿದ್ದು, ಹಣದ ಅವಶ್ಯಕತೆ ಇದೆ ಎನ್ನುತ್ತಾರೆ.
ಇದನ್ನು ನಂಬಿ ಜನರು ಹಣವನ್ನು ಹಾಕುತ್ತಿದ್ದಾರೆ. ಸದ್ಯ ಭಾರತದಲ್ಲಿ ಇಂಥ ವಂಚನೆ ಬೆಳಕಿಗೆ ಬಂದಿಲ್ಲ. ಆದರೆ ಯಾವಾಗ ಬೇಕಾದರೂ ಬರುವ ಸಾಧ್ಯತೆ ಇದೆ. ಇಂಥವರು ಮೊದಲಿಗೆ ಹಾಯ್ ಎನ್ನುವ ಮೂಲಕ ಮೆಸೇಜ್ ಆರಂಭಿಸುತ್ತಾರೆ. ಹೀಗೇನಾದರೂ ಹಣ ಕೇಳಿ ಕರೆಮಾಡಿದರೆ ಎಚ್ಚರಿಕೆಯಿಂದ ಇರಬೇಕು ಎಂದು ವಾಟ್ಸಾಪ್ ಸಂಸ್ಥೆ ಹೇಳಿದೆ.